ಮದ್ಯ ಸೇವಿಸಿ ಆಪರೇಷನ್ ವಾರ್ಡ್‌ನಲ್ಲಿ ನಿದ್ರೆಗೆ ಜಾರಿದ ವೈದ್ಯ; ರೋಗಿಗಳ ಪರದಾಟ

June 1, 2023
ಕರ್ನಾಟಕ: ಚಿಕ್ಕಮಗಳೂರು ಕಳಸ

ಶಸ್ತ್ರಚಿಕಿತ್ಸೆ ಮಾಡಲು ತೆರಳಿದ್ದ ವೈದ್ಯ ಕುಸಿದು ಬಿದ್ದಿದ್ದು, ಆತ ಆಸ್ಪತ್ರೆಗೆ ಮದ್ಯ ಸೇವಿಸಿ ಬಂದಿದ್ದಾರೆಂದು ರೋಗಿಗಳು ಮತ್ತು ಅವರ ಪೋಷಕರು ಆರೋಪಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ನಡೆದಿದೆ.

ಬುಧವಾರ, ಒಂಬತ್ತು ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರಿಗೆ ಅನಸ್ತೇಷಿಯಾ ಕೂಡ ನೀಡಲಾಗಿತ್ತು. ಆಪರೇಷನ್‌ ಮಾಡಲು ಬಂದ ವೈದ್ಯ ಬಾಲಕೃಷ್ಣ ಶಸ್ತ್ರಚಿಕಿತ್ಸಾ ವಾರ್ಡ್‌ನಲ್ಲಿಯೇ ಕುಸಿದುಬಿದ್ದಿದ್ದಾರೆ. ಪರಿಣಾಮ ಮಹಿಳೆಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.

ವೈದ್ಯ ಬಾಲಕೃಷ್ಣ ಆಸ್ಪತ್ರೆಯಲ್ಲಿಯೇ ಮದ್ಯಪಾನ ಮಾಡಿ ಬಂದಿದ್ದರು. ಮದ್ಯದ ಅಮಲಿನಲ್ಲಿ ಕುಸಿದು ಬಿದ್ದಿದ್ದಾರೆ. ಮಹಿಳೆಯರಿಗೆ ಬೆಳಗ್ಗೆ 8 ಗಂಟೆಗೆ ಅನಸ್ತೇಷಿಯಾ ಕೊಟ್ಟಿದ್ದರು. ಆದರೆ, ಮಧ್ಯಾಹ್ನ 2 ಗಂಟೆಯಾದರೂ ಆಪರೇಷನ್ ಮಾಡಿರಲಿಲ್ಲ. ಏನಾಯಿತೆಂದು ವಾರ್ಡ್‌ಗೆ ತೆರಳಿ ನೋಡಿದರೆ, ವೈದ್ಯ ನಿದ್ರೆ ಮಾಡುತ್ತಿದ್ದರು ಎಂದು ಮಹಿಳೆಯರ ಸಂಬಂಧಿಗಳು ಆರೋಪಿಸಿದ್ದಾರೆ.

ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಸ್ವಸ್ಥಗೊಂಡಿದ್ದ ವೈದ್ಯನನ್ನು ಆಸ್ಪತ್ರೆಯ ಸಿಬ್ಬಂದಿಗಳು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

“ವೈದ್ಯನ ವಿರುದ್ಧ ಮದ್ಯಪಾನ ಮಾಡಿದ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉಮೇಶ್ ತಿಳಿಸಿದ್ದಾರೆ.