ದೊಡ್ಡಬಳ್ಳಾಪುರ: ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ‌ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

 

ದೊಡ್ಡಬಳ್ಳಾಪುರದ ಟಿ.ಬಿ.ನಾರಾಯಣಪ್ಪ ಬಡಾವಣೆಯಲ್ಲಿರುವ ಪಿಡಿಒ ರಂಗಸ್ವಾಮಿ ಅವರ ನಿವಾಸ, ವಾಣಿಜ್ಯ ಸಂಕೀರ್ಣ, ಪಾಲನ‌ಜೋಗಹಳ್ಳಿಯ‌ ನಿವಾಸಗಳ ಮೇಲೂ ದಾಳಿ‌ ನಡೆಸಿ ಕಡತಗಳ ಪರಿಶಿಲನೆ‌ ನಡೆಸಲಾಗುತ್ತಿದೆ.

 

ಇದಲ್ಲದೇ ಸ್ವಂತ ಊರಾದ ತೂಬಗೆರೆ ಹೋಬಳಿಯ ಸೋತೇನಹಳ್ಳಿ ಗ್ರಾಮದ ನಿವಾಸ, ರಾಜಾನುಕುಂಟೆಯ ಕಾಕೋಳು ರಸ್ತೆಯಲ್ಲಿರುವ 7 ಕೋಟಿ ಬೆಲೆ ಬಾಳುವ ನಿವಾಸ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಬಳಿಯ ಜಮೀನು ಸೇರಿದಂತೆ ಹಲವೆಡೆ ಪೊಲೀಸರು ದಾಳಿ‌ ಮಾಡಿದ್ದಾರೆ.

ಸುಮಾರು‌ 20 ಅಧಿಕಾರಿಗಳ ತಂಡ ಬೆಳಿಗ್ಗೆ 5.30ಕ್ಕೆ ಏಕ ಕಾಲದಲ್ಲಿ‌ ಎಲ್ಲಾ ಕಡೆ ದಾಳಿ‌ ನಡೆಸಿದ್ದು, ಅದಾಯಕ್ಕಿಂತ ಹೆಚ್ಚು ಆಸ್ತಿ‌ ಹಾಗೂ ಬೇನಾಮಿ‌ ಹೆಸರಿನಲ್ಲಿ ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿ‌ ಮಾಡಿ ದಾಖಲೆ‌ ಪರಿಶೀಲಿಸಿದ್ದಾರೆ.

 

ಪಿಡಿಒ ರಂಗಸ್ವಾಮಿ‌ ಅವರ ಪತ್ನಿ ಗೌರಮ್ಮ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆಯಾಗಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ತೂಬಗೆರೆ ಗ್ರಾಮ‌ಪಂಚಾಯ್ತಿ ವ್ಯಾಪ್ತಿಯಲ್ಲಿ‌ 28 ಎಕರೆ ಜಮೀನು ಹೊಂದಿರುವುದು‌ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.