*ಸಂಭ್ರಮದಿಂದ ಸಾಗಿದ ದೊಣೆಹಳ್ಳಿ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ*

ಜಗಳೂರು: ತಾಲೂಕಿನ ದೊಣೆಹಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವವು ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಚಿಕ್ಕ ರಥೋತ್ಸವ ನಡೆಯಿತು. ಸಂಜೆ ರಥಕ್ಕೆ ಬಲಿಅನ್ನ ಸೇವೆ ಪೂರ್ಣಗೊಂಡ ನಂತರ ವಿಶೇಷ ಹೂಗಳಿಂದ ಅಲಂಕೃತವಾದ ಮಹಾ ರಥಕ್ಕೆ ಸ್ವಾಮಿಯ ಪಲ್ಲಕ್ಕಿಯನ್ನು ಮೂರು ಬಾರಿ ಪ್ರದಕ್ಷಿಣೆ ನಡೆಸಿ, ಬಸವೇಶ್ವರ ಸ್ವಾಮಿಯನ್ನು ರಥದಲ್ಲಿ ಕೂರಿಸಲಾಯಿತು. ನಂತರ ಸ್ವಾಮಿಯ ಮುಕ್ತಿ ಬಾವುಟದ ಪಟದ ಹರಾಜು ನಡೆಯಿತು. ತುಮಕೂರು ವಾಸಿ ದೊಣೆಹಳ್ಳಿ ನಪೂರಿ ಮನೆತನದ ಶ್ರೀ ಮತಿ ಮಮತ ದಯಾನಂದ್ ರವರು 40000ರೂ.ಗಳಿಗೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದುಕೊಂಡರು.

ಸಾವಿರಾರು ಭಕ್ತರ ಜಯಘೋಷದೊಂದಿಗೆ ಸಂಜೆ ಪ್ರಾರಂಭವಾದ ರಥ, ಊರಿನ ಮಧ್ಯೆ ಸಂಚರಿಸಿ ಪಾದಗಟ್ಟೆ ತಲುಪಿತು. ನಂತರ ರಾತ್ರಿ ಸ್ವಸ್ಥಾನಕ್ಕೆ ಮರಳಿತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿರುವ ಗ್ರಾಮದ ಜನತೆ ವರ್ಷಕ್ಕೊಮ್ಮೆ ರಥೋತ್ಸವದಲ್ಲಿ ಒಟ್ಟಿಗೆ ಸೇರಿ ತೇರು ಎಳೆದು ಸಂಭ್ರಮಿಸಿದರು. ಊರಿನ ಉತ್ಸಾಹಿ ಯುವಕರು ರಥವನ್ನು ವಿವಿಧ ಬಗೆಯ ಹೂಗಳಿಂದ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿ ರಥಕ್ಕೆ ಮೆರೆಗು ಹೆಚ್ಚಿಸಿದರು. ಗ್ರಾಮದ ಹಿರಿಯ ಮುಖಂಡರು, ರಾಜಕೀಯ ನಾಯಕರು, ದೊಣೆಹಳ್ಳಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳ ಜನತೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

*ವರದಿ – ಮೈಲನಹಳ್ಳಿ ದಿನೇಶ್ ಕುಮಾರ್*