ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ರಚನಾತ್ಮಕ ಪರಿಹಾರ — ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚಾಮರಾಜನಗರ:ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯಯುತವಾದ ಪರಿಹಾರ ಸಿಗಬೇಕು. ಪರಿಶಿಷ್ಟರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಸಾರ್ವಜನಿಕ ಹಿತಾಸಕ್ತಿಯಿಂದ ಒಟ್ಟಾಗಿ ಪರಿಹರಿಸುವ ಕಾರ್ಯವಾಗಬೇಕು. ಈ ದಿಸೆಯಲ್ಲಿ ಕ್ರಮ ವಹಿಸಲಾಗುತ್ತದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಕಾಲಕಾಲಕ್ಕೆ ಕರೆದು ಪರಿಶೀಲನೆ ನಡೆಸಿ ಅಗತ್ಯ ಕ್ರಮ ವಹಿಸಲಾಗುತ್ತಿದೆ. ನೂತನವಾಗಿ ನೇಮಕವಾಗಿರುವ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಪ್ರಸ್ತಾಪಿಸುವ ವಿಷಯಗಳನ್ನು ಮುಂಚಿತವಾಗಿಯೇ ಗಮನಕ್ಕೆ ತಂದಲ್ಲಿ ವಿವರವಾಗಿ ಚರ್ಚಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಿ ಆಗಬೇಕು. ವಿಶೇಷವಾಗಿ ಗ್ರಾಮೀಣ ಹಾಗೂ ಕಾಡಂಚಿನ ಜನರಿಗೆ ಜಾಗೃತಿ ಉಂಟುಮಾಡಬೇಕು. ಪರಿಶಿಷ್ಟ ಸಮುದಾಯದ ಜನತೆಯ ಸಮಸ್ಯೆಗಳು ತ್ವರಿತವಾಗಿ ಇತ್ಯರ್ಥವಾಗಬೇಕು. ಸುಳ್ವಾಡಿ ಪ್ರಕರಣದ ಸಂತ್ರಸ್ತರಿಗೆ ಭೂಮಿ ನೀಡುವ ಕೆಲಸ ಬೇಗನೆ ಆಗಬೇಕು. ಜೀತ ವಿಮುಕ್ತರಿಗೆ ಪರಿಹಾರ ಕಾರ್ಯಗಳು ಇನ್ನಿತರ ಸೌಲಭ್ಯಗಳು ಸಿಗಬೇಕು ಎಂಬೂದು ಸೇರಿದಂತೆ ಹಲವು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಸಮಿತಿಯ ಸದಸ್ಯರನ್ನು ಆಹ್ವಾನಿಸಬೇಕು. ಹೋಬಳಿಗಳ ವ್ಯಾಪ್ತಿಯಲ್ಲಿ ಅರಿವು ಕಾರ್ಯಕ್ರಮಗಳನ್ನು ಮನದಟ್ಟಾಗುವಂತೆ ರೂಪಿಸಬೇಕು. ಮುಂದಿನ ಸಭೆಯ ವೇಳೆಗೆ ಜೀತ ವಿಮುಕ್ತರ ಸಂಬಂಧ ವರದಿಯನ್ನು ಅಧಿಕಾರಿಗಳು ಸಲ್ಲಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ದೊಡ್ಡರಾಯಪೇಟೆ ಸಿದ್ದರಾಜು, ಅರಕಲವಾಡಿ ನಾಗೇಂದ್ರ, ಕೇತಮ್ಮ, ವೃಷಬೇಂದ್ರ, ರಮೇಶ್ ಪ್ರಭು, ಅರ್ಪಿತಾ, ರಜನಿ ತಿವಾರಿ, ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ