ಜಗಜೀವನ್ ರಾಮ್ ರವರ ಕಾಯಕ ನಿಷ್ಠೆ ನಮ್ಮೆಲ್ಲರಿಗೂ ಪ್ರೇರಣೆ.. ಧೀರಜ್ ಮುನಿರಾಜ್

ದೊಡ್ಡಬಳ್ಳಾಪುರ: ಬಾಬು ಜಗಜೀವನರಾಮ್ ಅವರು ವಿಶೇಷವಾಗಿ 1970-74ರಲ್ಲಿ ರಕ್ಷಣಾ ಸಚಿವರಾಗಿ ಅಮೋಘ ಸಾಧನೆ ಮಾಡಿದರು. ಅವರ ಕಾಯಕ ನಿಷ್ಠೆ ನಮ್ಮೆಲ್ಲರಿಗೂ ಪ್ರೇರಣೆ, ನಮ್ಮ ತಾಲೂಕಿನ ಡಾ.ಬಾಬು ಜಗಜೀವನ್ ರಾಮ್ ಭವನದ ನವೀಕರಣಕ್ಕೆ ಸರ್ಕಾರವು 1.5 ಕೋಟಿ ಅನುದಾನ ನೀಡಿದ್ದು, ಭವನದ ಉನ್ನತಿಕರಣ ಕಾರ್ಯವು ಶೀಘ್ರ ಪ್ರಾರಂಭಗೊಳ್ಳಲಿದೆ ಎಂದು ತಾಲ್ಲೂಕಿನ ಶಾಸಕ ಧೀರಜ್ ಮುನಿರಾಜುತಿಳಿಸಿದರು

ತಾಲೂಕು ದಂಡಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಡಾಕ್ಟರ್ ಬಾಬು ಜಗಜೀವನ್ ರಾಮ್ 118ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ರವರ ಜೀವನದಿಂದ ನಾವು ಅರಿಯಬೇಕಿರುವುದು ಅವರು ಪಡೆದ ವಿದ್ಯಾಭ್ಯಾಸ, ಅಂತೆಯೇ ನಾವು ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಅವರ ನಿರಂತರ 40 ವರ್ಷಗಳ ರಾಜಕೀಯ ಜೀವನದಲ್ಲಿ ಭಾರತದ ಉಪ ಪ್ರಧಾನಿಗಳಾಗಿ, ವಾರ್ತಾ ಮತ್ತು ಪ್ರಚಾರ, ಸಾರಿಗೆ, ರೈಲ್ವೆ, ಕಾರ್ಮಿಕ ಮತ್ತು ಪುನರ್ವಸತಿ, ಆಹಾರ, ಕೃಷಿ, ಸಹಕಾರ, ನೀರಾವರಿ ಇತ್ಯಾದಿ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಹಲವು ಹುದ್ದೆಗಳನ್ನು ಅಲಂಕರಿಸಿ ದೇಶದ ಜನತೆಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕರು

ಡಾ. ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಗೈರು ಹಾಜರಾದ ಹಲವು ಸರ್ಕಾರಿ ಇಲಾಖೆಗಳ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಮಾಹಿತಿ ನೀಡುವಂತೆ ತಾಲೂಕು ದಂಡಾಧಿಕಾರಿಗಳಾದ ವಿದ್ಯಾ ವಿಭಾ ರಾಥೋಡ್ ರವರಿಗೆ ಸೂಚಿಸಿದರು.

ಮುಖಂಡರಾದ ರಾಮಕೃಷ್ಣ ಮಾತನಾಡಿ ನಿರಂತರ ಶೋಷಣೆಯ ನಡುವೆಯೂ ಡಾ.ಬಾಬು ಜಗಜೀವನ್ ರಾಮ್ ರವರು ದೇಶದ ಹಸಿರು ಕ್ರಾಂತಿಯ ಹರಿಕಾರರಾಗಿ ಹೊರಹೊಮ್ಮಿರುವುದು ಅವರ ಶ್ರಮ ಹಾಗೂ ಪ್ರಾಮಾಣಿಕತೆಯನ್ನು ತಿಳಿಸುತ್ತದೆ ಅವರ ಜೀವನ ಶೈಲಿಯೇ ನಮಗೆ ಮಾರ್ಗದರ್ಶನ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅಪಾರವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಅಧಿಕಾರಿ ವರ್ಗ, ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ, ತಾಲೂಕಿನ ಕನ್ನಡ ಪರ ಹೋರಾಟಗಾರರು, ಪ್ರಗತಿಪರ ದಲಿತಪರ ಸಂಘಟನೆಗಳ ಮುಖಂಡರು ಪ್ರಮುಖರು, ಹಾಜರಿದ್ದರು