ವಿಜೃಂಭಣೆ ಯಿಂದ ನಡೆದ ಶ್ರೀ ಮಂಟೇಸ್ವಾಮಿ ಸಿದ್ದಪ್ಪಾಜಿ ಕೊಂಡೋತ್ಸವ

ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ಶ್ರೀ ಮಂಟೇಸ್ವಾಮಿ ಹಾಗೂ ಸಿದ್ದಪ್ಪಾಜಿ ಕೊಂಡೋತ್ಸವವು ಸಂಭ್ರಮ, ಸಡಗರಗಳಿಂದ ನಡೆಯಿತು.

ಈ ಹಬ್ಬದ ಪ್ರಯುಕ್ತ ಭಕ್ತಾದಿಗಳು ಮೂರು ದಿನಗಳಿಂದಲೂ ಸಕಲ ಸಿದ್ಧತೆ ನಡೆಸಿದ್ದರು.ದಲಿತ ಸಮುದಾಯದ ಬಡಾವಣೆಗಳಲ್ಲಿ ತಳಿರು ತೋರಣ ಹಾಗೂ ವಿದ್ಯುತ್ ದೀಪಾ ಗಳಿಂದ ಅಲಂಕರಿಸಲಾಗಿತ್ತು.ಯುಗಾದಿಯ ನಂತರದ ದಿನ ಮಂಟೇಸ್ವಾಮಿ ಸಿದ್ದಪ್ಪಾಜಿ ಕಂಡಾಯ ಗಳನ್ನು ಪೂಜಿಸಲಾಗುತ್ತದೆ,ಕಂಡಾಯಕ್ಕೆ ಹೂವು ಹೊಂಬಾಳೆ,ಸಿಂಗರಿಸಿ ಭಕ್ತರು ಕೊಂಡದ ಬಳಿ ಬರುತ್ತಾರೆ. ಹರಕೆ ಹೊತ್ತವರು ಸತ್ತಿಗೆ,ಸುರಿಪಾನಿ ಹಿಡಿದು ದೇವರನ್ನು ನೆನೆದು, ಅರ್ಚಿಸಿದ ನಂತರ ದೇವರ ಗುಡ್ಡರು ಮತ್ತು ಭಕ್ತಾದಿಗಳು ಇದಕ್ಕಾಗಿ ಸಿದ್ಧಪಡಿಸಿದ ಕೆಂಡದ ಮೇಲೆ ಹೆಜ್ಜೆ ಹಾಕಿದರು

ಹತ್ತಾರು ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನರು ಕೊಂಡೋತ್ಸವವನ್ನು ನೋಡಿ ಕಣ್ತುಂಬಿಕೊಂಡರು, ಕೊಂಡದ ಮೇಲೆ ದೂಪ ಹಾಕಿ ಭಕ್ತಿ ಭಾವ ಮೆರೆದರು, ರಾತ್ರಿ ನಡೆಯುವ ಉತ್ಸವದಲ್ಲಿ ದಲಿತರು ಮನೆ ಮನೆ ಮುಂದೆ ದೇವರ ಉತ್ಸವ ಮೂರ್ತಿಗೆ ತಂಬಿಟ್ಟು ಮತ್ತು ಕಡ್ಲೆಪುರಿ ಆರತಿ ಎತ್ತುವ ಮೂಲಕ ಭಕ್ತಿ ಮೆರೆದರು, ಮಂಟೇಸ್ವಾಮಿ ದೇಗುಲದ ಚಪ್ಪರದ ಮೇಲೆ ಬೇವಿನ ಎಲೆ ಮತ್ತು ಚಿಗುರು ಎಸೆದು ಕೊಂಡೋತ್ಸವವನ್ನು ಸಂಪನ್ನ ಗೊಳಿಸಿದರು. ರಾತ್ರಿ ಮೆರವಣಿಗೆಯಲ್ಲಿ ಯುವಕರು, ಮಹಿಳೆಯರು ಕುಣಿದು ಕುಪ್ಪಲಿಸಿ ಸಂಭ್ರಮಿಸಿದರು.

ಕೊಂಡೋತ್ಸವದ ನಂತರ ಮಾರನೇ ದಿನ ಶ್ರೀ ಮಂಟೇಸ್ವಾಮಿ ಹಾಗೂ ಸಿದ್ದಪ್ಪಾಜಿ ರವರ ಕಂಡಾಯಗಳನ್ನು ಮೆರವಣಿಗೆ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದರು.

ವರದಿ ಆರ್ ಉಮೇಶ್ ಮಲಾರಪಾಳ್ಯ