ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಮ್ ಜಯಂತಿ ಅದ್ದೂರಿ ಅರ್ಥಪೂರ್ಣ ಆಚರಣೆಗೆ ತೀರ್ಮಾನ : ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧ್ಯಕ್ಷತೆಯಲ್ಲಿ ಪೂರ್ವಬಾವಿ ಸಭೆ
ಚಾಮರಾಜನಗರ:ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರದೊಂದಿಗೆ ಏಪ್ರಿಲ್ 5 ರಂದು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಹಾಗೂ ಏಪ್ರಿಲ್ 14 ರಂದು ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಾಬೂಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನಿಧರ್ರಿಸಲಾಯಿತು.
ಸಂಘಟಣೆಗಳ ಮುಖಂಡರು ಮಾತನಾಡಿ ಸಾಕಷ್ಟು ಮುಂಚಿತವಾಗಿಯೇ ಇಬ್ಬರು ಮಹಾನೀಯರ ಜಯಂತಿ ಆಚರಣೆಯನ್ನು ಹಮ್ಮಿಕೊಳ್ಳಲು ಸಿದ್ದತೆ ಕೈಗೊಳ್ಳಬೇಕು ಕರಪತ್ರ ಆಹ್ವಾನ ಪತ್ರಿಕೆಗಳನ್ನು ಸಾಕಷ್ಟು ಮೊದಲೇ ಮುದ್ರಿಸಿ ತಲುಪಿಸಬೇಕು, ವಿಚಾರ ಸಂಕಿರಣ, ಕಾರ್ಯಕ್ರಮದಂದು ಮುಖ್ಯ ಭಾಷಣಕ್ಕಾಗಿ ಮಹನೀಯರ ವಿಚಾರಧಾರೆಗಳನ್ನು ಆಳವಾಗಿ ಅಧ್ಯಯನ ಮಾಡಿರುವವರನ್ನು ಆಹ್ವಾನಿಸಬೇಕು ಎಂದರು
ಡಾ.ಬಿಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರದ ಮೆರವಣಿಗೆಯು ಅದ್ದೂರಿಯಾಗಿ ನಡೆಯಬೇಕು. ಹೆಚ್ಚು ಕಲಾ ತಂಡಗಳನ್ನು ನಿಯೋಜಿಸಬೇಕು. ಎಲ್ಲಾ ತಾಲ್ಲೂಕುಗಳಲ್ಲಿಯೂ ಕಾರ್ಯಕ್ರಮ ವ್ಯವಸ್ಥಿತವಾಗಿ ಏರ್ಪಾಡಾಗಬೇಕು. ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗಿ ನಡೆಯಲು ನಿಯೋಜಿತವಾಗಲಿರುವ ಸಮಿತಿಗಳು ಎಲ್ಲಾ ಸಿದ್ದತೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂಬುದು ಸೇರಿದಂತೆ ಕಾರ್ಯಕ್ರಮ ಆಯೋಜನಾ ಸಂಬಂಧ ವಿವರವಾಗಿ ಸಲಹೆ ಅಭಿಪ್ರಾಯಗಳನ್ನು ಮುಖಂಡರು ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಜಯಂತಿಯನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗುವುದು. ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಅದ್ದೂರಿ ವೇದಿಕೆ ನಿರ್ಮಿಸಿ ಕಾರ್ಯಕ್ರಮ ನಡೆಸಲಾಗುವುದು ಮೆರವಣಿಗೆಗೆ ಮೆರಗು ತರಲು ಹೆಚ್ಚಿನ ಕಲಾ ತಂಡಗಳನ್ನು ನಿಯೋಜನೆ ಮಾಡಲಾಗುವುದು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮುತುವರ್ಜಿಯಿಂದ ಕಾರ್ಯಕ್ರಮ ಯಶಸ್ವಿಗೆ ಕ್ರಮ ವಹಿಸಲು ತಿಳಿಸಲಾಗಿದೆ ಎಂದರು.
ವಿಚಾರ ಸಂಕಿರಣ ಮತ್ತು ಜಯಂತಿ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರನ್ನು ಆಹ್ವಾನಿಸಬೇಕಿದೆ. ಇದಕ್ಕಾಗಿ ವಿಶೇಷ ಸಮಿತಿಯೊಂದನ್ನು ರಚಿಸಿ ಎಲ್ಲರ ಸಲಹೆ ಒಮ್ಮತದ ತೀರ್ಮಾನದಂತೆ ಭಾಷಣಕಾರರು, ವಿಷಯ ತಜ್ಞರನ್ನು ಆಯ್ಕೆ ಮಾಡಲಾಗುವುದು. ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಸಲು ಸಮಿತಿಗಳು ಜವಬ್ದಾರಿ ವಹಿಸಲಿವೆ. ಪೂರ್ವಭಾವಿ ಸಭೆಗಳನ್ನು ಸಮಿತಿ ಸದಸ್ಯರು ಕೈಗೊಂಡು ಎಲ್ಲಾ ಸಿದ್ದತೆಗಳನ್ನು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಇಬ್ಬರು ಮಹನೀಯರ ಜಯಂತಿ ಕಾರ್ಯಕ್ರಮ ಏರ್ಪಾಡು ಮಾಡಲಾಗುವುದು, ಎಲ್ಲಾ ಅಧಿಕಾರಿ ಸಿಬ್ಬಂದಿಗೆ ಕಾರ್ಯಕ್ರಮದಂದು ಹಾಜರಿರಲು ಸೂಚಿಸಲಾಗುವುದು ತಾಲ್ಲೂಕು ಮಟ್ಟದಲ್ಲಿಯೂ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಮಹಾನ್ ನಾಯಕರ ಜನ್ಮ ದಿನಾಚರಣೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪ ನಾಗ್ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುನಿರಾಜು, ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಕೆ.ಎಂ.ನಾಗರಾಜು, ಶಿವಮೂರ್ತಿ, ನಾಗರಾಜು, ನಾಗಯ್ಯ, ಯರಿಯೂರು ರಾಜಣ್ಣ, ಚಾ.ಗು.ನಾಗರಾಜು, ಜವರಯ್ಯ, ರಾಮಸಮುದ್ರ ಸುರೇಶ್, ಸಿ.ಎಂ.ಶಿವಣ್ಣ, ಪಿ.ಸಂಘಸೇನ, ಬಸವನಪುರ ರಾಜಶೇಖರ್, ಬ್ಯಾಡಮೂಡ್ಲು ಬಸವಣ್ಣ, ನಾರಾಯಣ್, ಕಂದಹಳ್ಳಿ ನಾರಾಯಣ, ನಾಗೇಶ್, ಆರೂರು ನಾಗೇಂದ್ರ, ಶಿವಕುಮಾರ್, ಮುರುಗೇಶ್, ಪರಶಿವಮೂರ್ತಿ, ಸಿದ್ದಪ್ಪಾಜಿ, ಡಿ. ಸ್ವಾಮಿ, ಸಿ.ಎಂ.ನರಸಿಂಹಮೂರ್ತಿ ಇನ್ನಿತರ ಮುಖಂಡರು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಬಳಿಕ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಕಾರ್ಯಕ್ರಮ ಏರ್ಪಾಡು ಸಂಬಂಧ ಎಲ್ಲಾ ಸಿದ್ದತೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ವರದಿ ಆರ್ ಉಮೇಶ್ ಮಲಾರಪಾಳ್ಯ