ಡಾ. ಬಿ.ಆರ್. ಅಂಬೇಡ್ಕರ್ ಶ್ರೇಷ್ಠ ಆರ್ಥಿಕ ತಜ್ಞರು –ಡಾ.ಕೃಷ್ಣರಾಜ್
ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಾನ್ ಆರ್ಥಿಕ ತಜ್ಞರಾಗಿದ್ದು ಪ್ರಾಯೋಗಿಕ ಅರ್ಥಶಾಸ್ತ್ರಜ್ಞರು ಆಗಿದ್ದರು ಎಂದು ಸರ್ಕಾರದ ಸಂಪನ್ಮೂಲ ಕ್ರೋಡೀಕರಣ ಸಮಿತಿಯ ತಜ್ಞರು ಹಾಗೂ ಬೆಂಗಳೂರಿನ ಸಾಮಾಜಿಕ, ಆರ್ಥಿಕ ಬದಲಾವಣೆ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಕೃಷ್ಣರಾಜ್ ಅವರು ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅಡಿಗಲ್ಲಾದ ಮೇರು ಕೃತಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಪುಸ್ತಕ ದಿ ಪ್ರಾಬ್ಲಂ ಆಫ್ ದಿ ರುಪಿಯ ಶತಮಾನೋತ್ಸವದ ಪ್ರಯುಕ್ತ ಭಾರತದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರದ ಪ್ರಭಾವ ಕುರಿತು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ನೆನಪು ಮಾಡಿಕೊಳ್ಳಲಾಗುತ್ತದೆ. ಆದರೆ, ಅವರೊಂದು ದೊಡ್ಡ ಪ್ರತಿಭೆ. ಅರ್ಥಶಾಸ್ತ್ರದ ಮೂಲಕ ಅವರ ಜೀವನ ಹಾಗೂ ಶಿಕ್ಷಣ ಪ್ರಾರಂಭವಾಯಿತು. ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ್ಲ ಎಂ.ಎ, ಹಾಗೂ ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಗೌರವವನ್ನು ಪಡೆದ ವಿದ್ಯಾರ್ಥಿಯಾಗಿದ್ದರು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ವಿವಿಯಲ್ಲಿ ಬರೆದು ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರ್ ಇನ್ ಸೈನ್ಸ್ ಪದವಿ ನೀಡಿ ಗೌರವಿಸಲಾಯಿತು ಎಂದು ಕೃಷ್ಣರಾಜ್ ಅವರು ತಿಳಿಸಿದರು.
ಅಂಬೇಡ್ಕರ್ ಅವರ ದಿ ಪ್ರಾಬ್ಲಂ ಆಫ್ ದಿ ರುಪಿ ಎಂಬ ಪುಸ್ತಕವನ್ನು ಮೂಲಾಧಾರವಾಗಿಟ್ಟುಕೊಂಡು ಅಂದೇ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾರಂಭಿಸಲಾಯಿತು. ಅಂಬೇಡ್ಕರ್ ಅವರು ದೇಶದ ಅಭಿವೃದ್ಧಿಯ ಕನಸು ಕಂಡಿದ್ದರು. ದೂರದೃಷ್ಟಿಯುಳ್ಳ ಅವರು ಆಗಿನ ಕಾಲದಲ್ಲಿ ರೂಪಾಯಿ ಸಮಸ್ಯೆಯ ಬಗ್ಗೆ ಬ್ರಿಟಿಷರಿಗೆ ವರದಿ ನೀಡಿದ್ದರು ಎಂದು ಡಾ.ಕೃಷ್ಣರಾಜ್ ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತಾನಾಡಿದ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಆರ್. ಗಂಗಾಧರ್ ಅವರು ಮಾತಾನಾಡಿ ಡಾ.ಬಿ,ಆರ್.ಅಂಬೇಡ್ಕರ್ ಅವರು ವಿಶ್ವಜ್ಞಾನಿ. ಅಪಾರ ವಿದ್ವತ್ತು,ಜ್ಞಾನ ಹೊಂದಿದ್ದ ಅಂಬೇಡ್ಕರ್ ಅವರು ವಿಶ್ವಶ್ರೇಷ್ಟ ಆರ್ಥಿಕ ತಜ್ಞರು ಆಗಿದ್ದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು ಅದರಲ್ಲೂ ಮಹಿಳೆಯರು ಶಿಕ್ಷಣವನ್ನು ಪಡೆಯಲು ಕಾರಣರಾದರು ಎಂದರು.
ಯುವಜನರು ಅಂಬೇಡ್ಕರ್ ಅವರ ಬಗ್ಗೆ ಆಳವಾಗಿ ಅದ್ಯಯನ ಮಾಡಬೇಕು. ಅಂಬೇಡ್ಕರ್ ಅವರಂತೆ ಉನ್ನತ ಶಿಕ್ಷಣ, ಜ್ಞಾನ ಪಡೆದು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್ ಅವರ ಅರ್ಥಶಾಸ್ತದಲ್ಲಿನ ಅಪಾರ ಜ್ಞಾನ, ಆರ್ಥಿಕ ಸುಧಾರಣೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಿದೆ. ಪ್ರೊ. ಎಂ.ಆರ್. ಗಂಗಾಧರ್ ಅವರು ಸಲಹೆ ಮಾಡಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಡಿ ತಿಮ್ಮಯ್ಯ ಅವರು ಮಾತನಾಡಿ ಯುವಜನರು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಮೊದಲು ನಾವೇನಾಗಬೇಕು ಎಂದು ಯೋಜನೆ ರೂಪಿಸಿಕೊಳ್ಳಬೇಕು. ಕೆಟ್ಟ ಹವ್ಯಾಸಗಳನ್ನು ಬಿಡಬೇಕು. ಕಷ್ಟಪಟ್ಟು ವ್ಯಾಸಂಗ ಮಾಡಬೇಕು. ವಿಷಯ ತಜ್ಞರು ಹೇಳುವ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಕಾಡಾ ಅಧ್ಯಕ್ಷರಾದ ಪಿ.ಮರಿಸ್ವಾಮಿ ಅವರು ಮಾತಾನಾಡಿ ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದ ಮತದಾನದ ಹಕ್ಕನ್ನು ಎಲ್ಲರಿಗೂ ಕೊಡಲು ಅಂಬೇಡ್ಕರ್ ಅವರೇ ಕಾರಣರಾದರು. ಕಾರ್ಮಿಕರ ಬದುಕಿಗೆ ಅನುಕೂಲವಾದ ಅನೇಕ ಯೋಜನೆಗಳನ್ನು ಅಂಬೇಡ್ಕರ್ ಅವರು ಜಾರಿಗೆ ತಂದರು ಎಂದು ತಿಳಿಸಿದರು.
ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಮಾತಾನಾಡಿ ಡಾ. ಬಿ,ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅರಿಯಬೇಕಿದೆ. ನೆಮ್ಮದಿ ಜೀವನಕ್ಕಾಗಿ ಅವರು ತಂದ ಹಲವು ಸುಧಾರಣೆ ನಮಗೆ ಮಾರ್ಗದರ್ಶನವಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುನಿರಾಜು ಅವರು ಅಂಬೇಡ್ಕರ್ ಅವರು ದೇಶಕ್ಕೆ ಕೊಟ್ಟ ಕೊಡುಗೆಯು ಪ್ರಾತಃ ಸ್ಮರಣೀಯವಾಗಿದೆ. ಅಂಬೇಡ್ಕರ್ ಅವರ ಕೃತಿಗಳನ್ನು ಮತ್ತೆ ಮತ್ತೆ ಓದಬೇಕು. ಅವರ ಮೇರು ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರ ಕೃತಿಗಳನ್ನು ಹೆಚ್ಚು ಅಧ್ಯಯನ ಮಾಡಬೇಕು. ಬದುಕು ಹಾಗೂ ಭವಿಷ್ಯಕ್ಕೆ ಅಂಬೇಡ್ಕರ್ ಬರಹದಲ್ಲಿ ಪರಿಹಾರವಿದೆ ಎಂದರು
ಬೆಂಗಳೂರು ವಿಶ್ವ ವಿದ್ಯಾಲಯದ ಗ್ರಾಮೀಣ ಅಭಿವೃದ್ದಿ ಅದ್ಯಯನ ಕೇಂದ್ರದ ಮಾಜಿ ನಿರ್ದೆಶಕರು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಟಿ.ಹೆಚ್.ಮೂರ್ತಿ. ಭಾಷಾಂತರ ನಿರ್ದೆಶಾನಾಲಯದ ನಿರ್ದೆಶಕರಾದ ಡಾ.ಎಂ. ವೆಂಕಟೇಶ್ ಡಾ.ದೇವಾನಂದ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ