ರಂಗಕಲೆ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿದೆ –ಬಿ ಎ ವಸಂತ್ ಕುಮಾರ್

ಚನ್ನರಾಯಪಟ್ಟಣ :ರಂಗಕಲೆ ಎಂಬುದು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿದೆ ಮತ್ತು ಸಿನಿಮಾದಿಂದಾಗಿ ರಂಗಭೂಮಿ ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ’ ಎಂದು ಬೆಟ್ಟಕೋಟೆ ಜ್ಯೋತಿಷ್ಯ ಹಾಗೂ ವಾಸ್ತು ತಜ್ಞರಾದ ಬಿ.ಎ.ವಸಂತಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಗ್ರಾಮದಲ್ಲಿ ಶ್ರೀ ವೆಂಕಟರಮಣಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ರಾಜಾವಿಕ್ರಮ ಅಥವಾ ಶನಿಪ್ರಭಾವ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲರನ್ನು ಕೈಬೀಸಿ ಆಶ್ರಯಕೊಡುವ ಕಲೆ ಅಂದರೆ ಅದು ರಂಗಕಲೆ. ರಂಗಭೂಮಿ ಮನುಷ್ಯನನ್ನ ಯಾವಾಗಲೂ ಖುಷಿಯಿಂದ ಇಡುತ್ತದೆ. ಜಗತ್ತಿನಲ್ಲಿ ಭೂಮಿಯೇ ಒಂದು ರಂಗಭೂಮಿ ಇದ್ದಂತೆ ಇಲ್ಲಿ ಎಲ್ಲರೂ ನಟರೇ. ಮನುಷ್ಯ ಪ್ರತಿಕ್ಷಣ ಒಂದಲ್ಲ ಒಂದು ರೀತಿಯ ಅಭಿನಯದಲ್ಲಿ ತೊಡಗಿಸಿಕೊಂಡಿರುತ್ತಾನೆ. ಮುಕ್ತವಾಗಿದ್ದ ರಂಗಭೂಮಿಯನ್ನು ಆ ಕಾಲಕ್ಕೆ ರಂಗಕಲೆಗೆ ಹೆಚ್ಚು ಬೇಡಿಕೆ ಇತ್ತು’ ಎಂದರು.

ದೇವನಹಳ್ಳಿ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪ್ರರ್ತಕರ್ತರ ಸಂಘದ ಅಧ್ಯಕ್ಷ ಸುನಿಲ್ ವಿ ಮಾತನಾಡಿ ಶ್ರೇಷ್ಠ ಕಲಾವಿದರು ಗ್ರಾಮೀಣ ರಂಗಭೂಮಿ ಹಿನ್ನೆಲೆಯಿಂದ ಬಂದ ಪ್ರತಿಭೆಗಳು. ರಂಗಭೂಮಿಯಿಂದ ನಾವು ಯಾವುದೇ ರೀತಿಯ ಆರ್ಥಿಕ ಪ್ರಗತಿಯನ್ನು ಕೇಳಬಾರದು. ಅದು ಯಾವಾಗಲೂ ಸಮರ್ಪಣೆ ಮನೋಭಾವ ಕೇಳುತ್ತದೆ. ರಂಗನಟ ನಟನೆಗೆ ಸಮರ್ಪಿಸಿಕೊಳ್ಳಬೇಕಾಗುತ್ತದೆ. ನಟನೆ ಅನ್ನುವುದು ಸಾಂಸ್ಕೃತಿಕ ಬದುಕಿನ ಒಂದು ಅಂಗ’ ಎಂದು ತಿಳಿಸಿದರು.

ನಾಟಕ ನಿರ್ದೇಶಕ ಎಂ.ವಿ.ನಾಯ್ಡು ಮಾತನಾಡಿ ರಂಗಭೂಮಿಗೆ ತನ್ನದೇ ಆದ ಇತಿಹಾಸ ಪರಂಪರೆ ಇದ್ದು, ಜೀವಂತ ಕಲೆಯಾದ ರಂಗಭೂಮಿ ಕಲೆಗೆ ಸಮಾಜದಲ್ಲಿ ತನ್ನದೇ ಆದ ಗೌರವ ಇದೆ. ಇಂದು ನಗರ ಪಟ್ಟಣ ಪ್ರದೇಶಗಳಲ್ಲಿ ನಾಟಕಗಳು ಮಾಯವಾಗುತ್ತಿದ್ದು, ಪ್ರೋತ್ಸಾಹವೂ ಕಡಿಮೆಯಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಹಾಗಿಲ್ಲ. ಇಲ್ಲಿ ರಂಗಭೂಮಿ ಕಲೆ ತನ್ನದೇ ಆದ ಸ್ಥಾನ ಹೊಂದಿದೆ ಎಂದರು.
ಈ ಸಂಧರ್ಭದಲ್ಲಿ ನಾಟಕ ನಿರ್ದೇಶಕ ಎಂ.ವಿ.ನಾಯ್ಡು,ಬೆಟ್ಟಕೋಟೆ ಗ್ರಾಪಂ ಸದಸ್ಯ ನಾರಾಯಣಸ್ವಾಮಿ, ನಲ್ಲೂರು ಗ್ರಾಪಂ‌ಮಾಜಿ ಸದಸ್ಯ ಶಿವ ಪ್ರಸಾದ್, ದೇವನಹಳ್ಳಿ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ವಿ.ಹರೀಶ್,ಗುತ್ತಿಗೆದಾರ ಆರ್.ಚನ್ನಕೇಶವ,ಗ್ರಾಮದ ಮುಖಂಡರಾ ರವಿಕುಮಾರ್,ಬಿ.ಕೆ.ಪದ್ಮನಾಭ್ ಮತ್ತಿತರರು ಇದ್ದರು.