ದೇಶದ ಸಾಮಾಜಿಕ ಸುಧಾರಣೆಗೆ ಅಂಬೇಡ್ಕರ್ ಪಾತ್ರ ಅಪಾರ– ಬಿ ಎನ್. ನರಸಿಂಹಮೂರ್ತಿ

ದೊಡ್ಡಬಳ್ಳಾಪುರ: ಪ್ರಪಂಚದಲ್ಲೆ ಅತಿ ದೊಡ್ಡ ಸಂವಿಧಾನ ಹೊಂದಿರುವ ದೇಶ ಭಾರತವಾದರೆ, ಚಿಕ್ಕ ಸಂವಿಧಾನವನ್ನು ಅಮೇರಿಕ ಹೊಂದಿದೆ ಎಂದು ಬೆಂಗಳೂರಿನ ಆದರ್ಶ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಎನ್.ನರಸಿಂಹಮೂರ್ತಿ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಭಾರತದ ಸಂವಿಧಾನ ರೂಪಿಸುವ ಜವಾಬ್ಧಾರಿಯನ್ನು ಹೊತ್ತು ಅಪಾರವಾದ ಶ್ರಮವಹಿಸಿದ ಡಾ.ಬಿ.ಆರ್. ಅಂಬೇಡ್ಕರ್, ಭಾರತದ ಸಾಮಾಜಿಕ ಸುಧಾರಣೆಗಾಗಿ ನಿರಂತರ ಹೋರಾಟ ನಡೆಸಿದರು. ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡುತ್ತಿದ್ದ ಅಂಬೇಡ್ಕರ್ ಅವರಿಗೆ ಸಮಸಮಾಜ ನಿರ್ಮಾಣ ಮಾಡುವುದು ಅವರ ಮುಖ್ಯ ಗುರಿಯಾಗಿತ್ತು ಎಂದರು.
ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಶಂಕರ್ ಮಾತನಾಡಿ, ವಿದ್ಯೆಯ ಮಹತ್ವವನ್ನು ಅರಿತಿದ್ದ ಡಾ.ಬಿ.ಅರ್.ಅಂಬೇಡ್ಕರ್ ಅವರು, ಅನಕ್ಷರತೆ ಮತ್ತು ಅಜ್ಞಾನವನ್ನು ಮುಕ್ತಗೊಳಿಸಲು ಶಿಕ್ಷಣ ಅತಿ ಅಗತ್ಯವೆಂದರು.
ಶಿಕ್ಷಣದಿಂದ ಮಾತ್ರ ಶೋಷಣೆಗೆ ಒಳಗಾದವರನ್ನು ಸಾಮಾಜಿಕ ಅನ್ಯಾಯದಿಂದ ಮುಕ್ತ ಗೊಳಿಸಲು ಸಾಧ್ಯವಾಗುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಲು ಜನರಿಗೆ ಶಿಕ್ಷಣ ಸಹಕಾರಿ ಆಗುತ್ತದೆ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ ಎಂದರು.
ಕನಸವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಮಾತನಾಡಿ, ಬುದ್ಧ, ಬಸವಣ್ಣ ಅವರ ಆಶಯದಂತೆ ತಾರತಮ್ಯಗಳಿಂದ ಮುಕ್ತವಾದ ಸಮಾಜವನ್ನು ಸ್ಥಾಪಿಸುವುದು ಡಾ. ಅಂಬೇಡ್ಕರ್ ಅವರ ಗುರಿ ಯಾಗಿತ್ತು. ಸಮಾಜದಲ್ಲಿರುವ ಶೋಷಣೆ, ದಬ್ಬಾಳಿಕೆ ಮತ್ತು ತಾರತಮ್ಯದ ವಿರುದ್ಧ ಅವರ ಹೋರಾಟ ನಿರಂತರ ವಾಗಿತ್ತು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರಜಾಪ್ರಭುತ್ವ, ಸಮಾನತೆ ಮತ್ತು ನ್ಯಾಯದ ಪರವಾದ ವಿಚಾರಗಳನ್ನು ಸೇರಿಸಿದರು. ಇದ್ದರಿಂದಾಗಿ
ವಿಶ್ವದಲ್ಲಿ ನಮ್ಮ ಭಾರತ ಸಂವಿಧಾನ ಕ್ಕೆ ವಿಶೇಷ ಗೌರವ, ಘನತೆ, ಕೀರ್ತಿ ದೊರಕಿದೆ ಎಂದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ, ಪ್ರಬಂಧ, ಅಶು ಭಾಷಣ ಹಾಗೂ ಕವನ ವಾಚನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎನ್.ಮಹೇಶ್, ಹಣಬೆ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ಓ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಸಿ.ಅಣ್ಣಯ್ಯ, ಕಲಾವಿದ ದರ್ಗಾ ಜೋಗಿಹಳ್ಳಿ ಮಲ್ಲೇಶ್ ಮುಂತಾದವರು ಭಾಗವಹಿಸಿದ್ದರು.