ಚಿರತೆದಾಳಿಗೆ ನಾಲ್ಕು ಜಾನುವಾರು ಸಾವು

ಗುಂಡ್ಲುಪೇಟೆ:ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಅಧಿಕವಾಗಿದ್ದು, ಗ್ರಾಮದೊಳಗೆ ಬಂದ ಚಿರತೆ ಮೂರು ಕರುಗಳನ್ನು ಕೊಂದಿರುವ ಘಟನೆ ಬಂಡೀಪುರದ ವ್ಯಾಪ್ತಿಯ ಹೊಂಗಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿ ಗ್ರಾಮದ ನಾಗಪ್ಪರವರಿಗೆ ಸೇರಿದ ಕರುಗಳನ್ನು ದೊಡ್ಡಿಯಲ್ಲಿ ಕಟ್ಟಿ ಹಾಕಲಾಗಿತ್ತು. ರಾತ್ರಿ ವೇಳೆ ಕಾಡಿನಿಂದ ಗ್ರಾಮದೊಳಗೆ ಬಂದ ಚಿರತೆ ಕರುಗಳನ್ನು ಕೊಂದು ಪರಾರಿಯಾಗಿದೆ. ಇದರಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.

ಹೊಂಗಹಳ್ಳಿ ಗ್ರಾಮಕ್ಕೆ ಗುಂಡ್ಲುಪೇಟೆ ಎ.ಸಿ.ಎಫ್. ಸುರೇಶ್ .ಆರ್.ಎಫ್.ಓ.ಪುನಿತ್ ಆಗಮಿಸಿದಾಗ, ಗ್ರಾಮಸ್ಥರೊಂದಿಗೆ ಮಾತಿನ ಚಕಮಕಿ ನಡೆಯಿತು. ಪರಿಹಾರ ಬೇಕಿಲ್ಲ. ಕಾಡಿನಿಂದ ಬರುವ ಕಾಡು ಪ್ರಾಣಿಗಳನ್ನು ತಡೆಯಿರಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಕಾಡಂಚಿನ ಕೃಷಿ ಭೂಮಿಯ ಸುತ್ತಾ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದರು.