ಸಾಲ ಕೊಟ್ಟಿದ್ದು 5 ಲಕ್ಷ ವಸೂಲಿ ಮಾಡಿದ್ದು 8.5 ಲಕ್ಷ  ಮತ್ತೆ 60 ಸಾವಿರ ಹಣ ವಸೂಲಿಗೆ ಯತ್ನಮೈಕ್ರೋ ಫೈನಾನ್ಸ್ ಕಂಪನಿ ಕಿರುಕುಳ

ದೊಡ್ಡಬಳ್ಳಾಪುರ : ಮನೆ ಕಟ್ಟುವ ಕಾರಣಕ್ಕೆ ಇದ್ದ ಮನೆಯನ್ನ ಒತ್ತೆ ಇಟ್ಟು 5 ಲಕ್ಷ ಹಣವನ್ನ ಸಾಲ ತೆಗೆದುಕೊಳ್ಳಲಾಗಿತ್ತು, ಅಸಲಿ ಬಡ್ಡಿ ಸೇರಿ 5 ಲಕ್ಷಕ್ಕೆ 8.5 ಲಕ್ಷ ಹಣವನ್ನು ಕಟ್ಟಿದ್ರು, ಇಷ್ಟಕ್ಕೆ ಮೈಕ್ರೋ ಫೈನಾನ್ಸ್ ಕಂಪನಿಯ ಹಣದಾಹ ಕಡಿಮೆಯಾಗಿರಲಿಲ್ಲ, ಮತ್ತೆ 60 ಸಾವಿರ ಹಣ ಕಟ್ಟುವಂತೆ ಸಾಲಗಾರನಿಗೆ ಕಿರುಕುಳ ನೀಡುತ್ತಿದ್ದಾರೆ.

ದೊಡ್ಡಬಳ್ಳಾಪುರದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ ಮೋಹನ್ ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಮನನೊಂದಿದ್ದಾರೆ, ಸಾಲದ ಹಣಕ್ಕಿಂತ ಹೆಚ್ಚು ಹಣ ಕಟ್ಟಿ ಕಟ್ಟಿ ಸೋತು ಸುಣ್ಣವಾಗಿದ್ದಾರೆ, ಬ್ಯಾಂಕ್ ನವರ ಮಾನಸಿಕ ಕಿರುಕುಳಕ್ಕೆ ಬೇಸತ್ತ ಅವರು ನ್ಯಾಯ ಕೊಡುವಂತೆ ಕರವೇ ಮೊರೆ ಹೋಗಿದ್ದಾರೆ

2019ರಲ್ಲಿ ಮೋಹನ್ ತಮ್ಮ ತಾಯಿ ಶಶಿಕಲಾ ಹೆಸರಿನಲ್ಲಿ ನಗರದ SMFG ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ನಲ್ಲಿ 5 ಲಕ್ಷ ಸಾಲವನ್ನು ತೆಗೆದುಕೊಂಡಿದ್ದರು, ಸಾಲಕ್ಕೆ ಮನೆಯನ್ನ ಒತ್ತೆ ಇಟ್ಟಿದ್ದರು, ಪ್ರತಿ ತಿಂಗಳು 13,530 ರಂತೆ 60 ತಿಂಗಳಲ್ಲಿ ಸಾಲ ತೀರಿಸುವ ಒಪ್ಪಂದ ಮಾಡಿಕೊಂಡಿದ್ದರು, ಕೊರೋನಾ ಸಮಯದಲ್ಲಿ 3 ತಿಂಗಳು ಹೊರತು ಪಡಿಸಿ ಇಲ್ಲಿಯವರೆಗೂ 63 ಕಂತುಗಳನ್ನು ಕಟ್ಟಲಾಗಿದೆ, 5 ಲಕ್ಷ ಸಾಲಕ್ಕೆ 8.5 ಲಕ್ಷ ಹಣವನ್ನ ಕಟ್ಟಲಾಗಿದೆ. ಆದ್ರೆ, ಬ್ಯಾಂಕ್ ನವರು ಮತ್ತೆ 60 ಸಾವಿರ ಹಣ ಕಟ್ಟುವಂತೆ ಕಿರುಕುಳ ಕೊಡುತ್ತಿದ್ದಾರೆಂದು ಮೋಹನ್ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ

ಕರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು SMFG ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಬಳಿ ತೆರಳಿ ಮೋಹನ್ ಆಗುತ್ತಿರುವ ಅನ್ಯಾಯವನ್ನು ಕೇಳಿದ್ದಾರೆ, ಇದೇ ವೇಳೆ ಮಾಧ್ಯಮ ಜೊತೆಯಲ್ಲಿ ಮಾತನಾಡಿದ ಅವರು, ಮೋಹನ್ ಸಂಪೂರ್ಣ ಹಣವನ್ನು ಕಟ್ಟಿದ್ದಾನೆ, ಆದರೂ ಬ್ಯಾಂಕ್ ನವರು ಸಾಲ ತೀರಿಸುವಂತೆ ಮಾನಸಿಕ ಕಿರುಕಳ ಕೊಡುತ್ತಿರುವುದನ್ನ ನಾವು ಸಹಿಸುವುದಿಲ್ಲ, ಮೋಹನ್ ರವರಿಗೆ ಸೇರಿದ ಮನೆ ಪತ್ರಗಳನ್ನ ವಾಪಸ್ ನೀಡದಿದ್ದಲ್ಲಿ ಬ್ಯಾಂಕ್ ಮುಂದೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ನೀಡಿದರು

ಸ್ಥಳೀಯರಾದ ಅಂಜಿಯವರು ಮಾತನಾಡಿ, ಮೋಹನ್ ಕೊರೋನಾ ಸಮಯದಲ್ಲಿ 3 ತಿಂಗಳು ಮಾತ್ರ ಕಂತುಗಳನ್ನ ಕಟ್ಟಿರಲಿಲ್ಲ, ಅನಂತರ ಆ ಕಂತುಗಳನ್ನ ಬಡ್ಡಿ ಸಮೇತ ತೀರಿಸಿದ್ದಾರೆ, ಮನೆಪತ್ರಗಳನ್ನ ವಾಪಸ್ ಕೇಳಿದ್ರು ಮತ್ತೆ 60 ಸಾವಿರ ಹಣ ಕಟ್ಟುವಂತೆ ಹೇಳುತ್ತಿದ್ದಾರೆ, ಮನೆಪತ್ರಗಳನ್ನ ವಾಪಸ್ ಕೊಡುವುದಿಲ್ಲವೆಂದು ಹೇಳುತ್ತಿದ್ದಾರೆ, ಬ್ಯಾಂಕ್ ನವರ ಕಿರುಕಳಕ್ಕೆ ಮೋಹನ್ ವಿಷ ಕುಡಿದು ಸಾಯುವುದ್ದಾಗಿ ಹೇಳುತ್ತಿದ್ದಾನೆ ಎಂದರು

ಕರವೇ ತಾಲೂಕು ಘಟಕ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, ಬ್ಯಾಂಕ್ ನವರು ಹೇಳಿದಂತೆ 60 ಕಂತುಗಳನ್ನ ಕಟ್ಟಲಾಗಿದೆ, ಹೆಚ್ಚುವರಿಯಾಗಿ ಕಟ್ಟಲಾಗಿರುವ 3 ಕಂತುಗಳ ಹಣವನ್ನ ವಾಪಸ್ ಮೋಹನ್ ರವರಿಗೆ ನೀಡ ಬೇಕು, ಅವರ ತಾಯಿ ಸಾವನ್ನಪ್ಪಿದ್ದಾರೆ, ಅವರಿಗೆ ವಿಮೆ ಮಾಡಿಸದೆ ವಂಚನೆ ಮಾಡಿದ್ದಾರೆ, ಸಾಲಗಾರರು ಸಾವನ್ನಪ್ಪಿದ್ದಾಗ ಬಡ್ಡಿಯನ್ನ ಮನ್ನಾ ಮಾಡಬೇಕು, ಆದರೂ ಬ್ಯಾಂಕ್ ನವರು ಹೆಚ್ಚುವರಿ ಹಣ ಸುಲಿಗೆ ಮಾಡಿದ್ದಾರೆ, ಬ್ಯಾಂಕ್ ನವರು ತಮ್ಮ ತಪ್ಪು ತಿದ್ದುಕೊಂಡು ಹಣ ವಾಪಸ್ ನೀಡದಿದ್ದಾರೆ ಬ್ಯಾಂಕ್ ಮುಂದೆ ಪ್ರತಿಭಟನೆ ಎಚ್ಚರಿಕೆಯನ್ನ ನೀಡಿದರು