ಬಣ್ಣದ ಕಾರ್ಖಾನೆಗಳಿಗೆ ಬಣ್ಣದ ನೀರು ಸಂಸ್ಕರಣ ಘಟಕ ನಿರ್ಮಿಸಲು ನೇಕಾರ ಹೋರಾಟ ಸಮಿತಿ ಒತ್ತಾಯ

ದೊಡ್ಡಬಳ್ಳಾಪುರ: ರೇಷ್ಮೆ ಮತ್ತು ಕೃತಕ ರೇಷ್ಮೆ ಬಣ್ಣ ಹಚ್ಚುವ ಘಟಕಗಳಿಗೆ ಬಣ್ಣದ ನೀರು ಸಂಸ್ಕರಣ ಘಟಕವನ್ನು ನಿರ್ಮಾಣ ಮಾಡಲು ಒತ್ತಾಯಿಸಿ ಬಿ. ಜಿ. ಹೇಮಂತರಾಜು ನೇತೃತ್ವದಲ್ಲಿ ನೇಕಾರ ಹೋರಾಟ ಸಮಿತಿ ಸದಸ್ಯರು ನಗರಸಭಾ ಆಯುಕ್ತರಿಗೆ ಮನವಿ ಸಲ್ಲಿಸಿದರು.

ನಗರಸಭಾ ಆಯುಕ್ತರಿಗೆ ಮನವಿ ಸಲ್ಲಿಸಿದ ಬಳಿಕ ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಬಿ. ಜಿ. ಹೇಮಂತರಾಜು ಸುದ್ದಿಗಾರರೊಂದಿಗೆ ಮಾತನಾಡಿ ರೇಷ್ಮೆ ಬಣ್ಣ ಮಾಡಿದ ನೀರು ಕೆರೆಗಳಿಗೆ ಹರಿದು ಕೆರೆ ನೀರು ಮಲಿನವಾಗುತ್ತಿದೆ ಎಂದು ನಗರಸಭೆ ಹಾಗೂ ಪರಿಸರ ಮಂಡಳಿಯವರು ಬಣ್ಣದ ಕಾರ್ಖಾನೆ ಗಳವರಿಗೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆಯ ನೋಟಿಸ್ ನೀಡಿರುವುದು ಖಂಡನೀಯ. ಮೇಲಾಗಿ ಬಣ್ಣದ ಕಾರ್ಖಾನೆಗಳ ನೀರು ಕೆರೆಗೆ ಹರಿದು ಕೆರೆ ನೀರು ಮಲಿನವಾಗುತ್ತಿದೆ ಎಂಬ ಹೇಳಿಕೆಯೇ ಅವೈಜ್ಞಾನಿಕವಾದುದು. ಸುಮಾರು ಎಪ್ಪತ್ತು ವರ್ಷಗಳಿಂದ ಬಣ್ಣದ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು ಇಷ್ಟು ವರ್ಷಗಳಿಂದ ಬಣ್ಣ ತೊಳೆದ ನೀರಿನಿಂದ ಪರಿಸರ ಮಲಿನವಾಗದೆ ಇದ್ದು ಈಗ ಪರಿಸರ ಮಾಲಿನ್ಯದ ಪ್ರಶ್ನೆ ಮುಂದಿಟ್ಟುಕೊಂಡು ಮೇಲ್ಕಂಡ ಇಲಾಖೆಗಳು ಬಣ್ಣದ ಕಾರ್ಖಾನೆಗಳ ಮೇಲೆ ಕ್ರಮದ ನೆಪದಲ್ಲಿ ಪರೋಕ್ಷವಾಗಿ ನೇಕಾರಿಕೆಗೆ ತೊಂದರೆ ಕೊಡುವುದು ಖಂಡನೀಯ ವಿಚಾರ. ಸಾಮಾನ್ಯವಾಗಿ ಬಣ್ಣದ ವೃತ್ತಿ ನಡೆಸುವವರು ಮೂಲತಹ ಬಡವರು. ಸ್ವಂತಕ್ಕೆ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ಬಣ್ಣ ಮಾಡುವ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಇವರ ಮೇಲಿನ ಕ್ರಮ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೇ ಹಾಕಿದಂತೆ ಆಗಿದೆ. ಆದ್ದರಿಂದ ಇವರಿಗೆ ಪರ್ಯಾಯವಾಗಿ ಮೇಲ್ಕಂಡ ಇಲಾಖೆಗಳು ಒಂದೇ ಕಡೆ ಸಂಸ್ಕರಣ ಘಟಕ ಮಾಡಿಕೊಟ್ಟರೆ ಬಣ್ಣದ ನೀರು ಕಾಲುವೆಗೆ ಬಿಡದೆ ಸಂಸ್ಕರಣ ಘಟಕಗಳಿಗೆ ಬಿಡುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ ಈ ಬಗ್ಗೆ ಮೇಲ್ಕಂಡ ಇಲಾಖೆಗಳು ಗಮನ ಹರಿಸಬೇಕೆಂದು ಹೇಮಂತರಾಜ್ ಹೇಳಿದರು.
ನೇಕಾರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಲೋಕೇಶ್, ಕೆ. ಜಿ. ಗೋಪಾಲ್, ಸೂರ್ಯಪ್ರಕಾಶ್, ರಮೇಶ್ ರೆಡ್ಡಿ, ರಂಗಸ್ವಾಮಿ, ನಟರಾಜ್, ಸಾಯಿರಾಂ, ರಾಮಚಂದ್ರಪ್ಪ ಗೋವಿಂದಪ್ಪ ಹಾಜರಿದ್ದರು.