ನಗರದಲ್ಲಿ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ

ನಗರದಲ್ಲಿ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ

ಮತದಾತರಿಗೆ ವ್ಯವಸ್ಥಿತ ಜಾಗೃತಿ, ಸುಭ್ರದ್ರ ಪ್ರಜಾಪ್ರಭುತ್ವ ದೇಶ ನಿರ್ಮಾಣ ಹಾಗೂ ಮತದಾರತರ ಪಟ್ಟಿಗೆ ಗರಿಷ್ಠ ದಾಖಲಾತಿ ಆಶಯದೊಂದಿಗೆ ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯನ್ನು ನಗರದಲ್ಲಿಂದು ಹಲವು ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಆಚರಣೆ ಕಾರ್ಯಕ್ರಮದಲ್ಲಿ ಗಣ್ಯರು, ಅಧಿಕಾರಿಗಳು ಮತ್ತು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ, ಕೇಸರಿ ಬಿಳಿ ಹಸಿರು ಬಣ್ಣದ ಬಲೂನ್‍ಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಹಾಗೂ ಇತರೆ ಗಣ್ಯರು ಹಾಜರಿದ್ದ ಕಾರ್ಯಕ್ರಮದಲ್ಲಿ ನಗರದ ಸರ್ಕಾರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ನುಸಾ ಫಾತೀಮಾ ಖಾನ್ ಅವರು ಅಚ್ಚುಕಟ್ಟಾಗಿ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದ್ದು ವಿಶೇಷವಾಗಿತ್ತು.

ಬಳಿಕ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ಮನದಾನ ನಮ್ಮ ಹಕ್ಕು, ಮತದಾನ ಬಿಟ್ಟರೆ ಇನ್ನೊಂದಿಲ್ಲ, ನೈತಿಕ ಮತದಾನ ಮಾಡಿ, ಮತದಾನ ಮಾಡಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ ಸೇರಿದಂತೆ ಮತದಾನದ ಅರಿವು ಮೂಡಿಸುವ ಇತರೆ ವಿವಿಧ ಬಣ್ಣದ ಸ್ಟಿಕ್ಕರ್‍ಗಳನ್ನು ವೃಕ್ಷಕ್ಕೆ ಅಳವಡಿಸಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಮತದಾನದ ಮಹತ್ವ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ. ಸದೃಢ ದೇಶ ನಿರ್ಮಾಣಕ್ಕೂ ಇದು ನೆರವಾಗಬೇಕು. ಪ್ರಜಾಪ್ರಭುತ್ವದ ಸುಭದ್ರತೆಗಾಗಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಮತದಾರರು ಮುಂದಾಗಬೇಕು. ನೈತಿಕ ಮತದಾನವನ್ನು ಪ್ರೋತ್ಸಾಹಿಸಬೇಕು ಎಂದರು.

ಇದೇ ವೇಳೆ ಜಿಲ್ಲೆಯಲ್ಲಿ 18 ವರ್ಷ ತುಂಬಿದ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಎಲ್ಲರಿಗೂ ರಾಷ್ಟ್ರೀಯ ಮತದಾರರ ದಿನದ ಶುಭಾಷಯಗಳನ್ನು ತಿಳಿಸಿ, ಪ್ರತಿವರ್ಷದಂತೆ ಜಿಲ್ಲೆಯಲ್ಲಿ ಈ ಬಾರಿಯು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಹಬ್ಬದ ಮಾದರಿಯಲ್ಲಿ ಆಚರಿಸಲಾಗುತ್ತಿದೆ. ಮತದಾರರ ದಿನ ಆಚರಣೆಯನ್ನು ಸಂವಿಧಾನದ ಹಬ್ಬವಾಗಿ ನಾವೆಲ್ಲರೂ ಆಚರಿಸಬೇಕು ಎಂದರು.

ಸಮತಾ ಸೊಸೈಟಿಯ ಅಧ್ಯಕ್ಷರು ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ರಾಯಬಾರಿಯಾಗಿದ್ದ ದೀಪಾ ಬುದ್ದೆ ಅವರು ಮಾತನಾಡಿ ರಾಷ್ಟ್ರೀಯ ಮತದಾರರ ದಿನವನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಮತದಾನ ಅರಿವು ಮೂಡಿಸುವ ಪ್ರಮುಖ ಕಾರ್ಯಚಟುವಟಿಕೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಪಾಲ್ಗೊಂಡು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡುವುದಲ್ಲದೆ ವಸತಿ, ಇತರೆ ಅಗತ್ಯ ಸೌಲಭ್ಯಗಳನ್ನು ನೀಡಿ ಜಿಲ್ಲಾಡಳಿತ ಉತ್ತಮ ಕೆಲಸ ಮಾಡುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಇದು ಆಗಬೇಕು ಎಂದ ಅವರು ದೇಶದ ಪ್ರತಿಯೊಬ್ಬರು ತಮ್ಮ ಅಸ್ಮಿತೆಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಸ್ಮರಿಸಿದರು.

ಬಳಿಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಂಡ ಲಿಂಗತ್ವ ಅಲ್ಪಸಂಖ್ಯಾತರಿಗೆ ಏರ್ಪಡಿಸಿದ್ದ ಸೆಲ್ಫಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಮತದಾನದ ಕುರಿತ ಪ್ರಬಂಧ, ರಸಪ್ರಶ್ನೆ ಮತ್ತು ಭಿತ್ತಿಚಿತ್ರ ಸ್ಪರ್ಧೆಗಳಲ್ಲಿನ ವಿಜೇತರಿಗೆ ಹಾಗೂ ದೇಶಾದ್ಯಂತ ಗಮನ ಸೆಳೆದ ರೇಷ್ಮೆ ಸೀರೆಯಲ್ಲಿ ಮತದಾನದ ಜಾಗೃತಿ ಮುದ್ರಿಸಿ ವಿತರಿಸಿದ ಕೊಳ್ಳೇಗಾಲದ ಕೈಮಗ್ಗ ನೇಕಾರರ ಸಂಘಕ್ಕೆ ಪ್ರಮಾಣಪತ್ರ, ಸ್ಮರಣಿಕೆಯೊಂದಿಗೆ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನಗಳನ್ನು ವಿತರಿಸಲಾಯಿತು.
ಅಲ್ಲದೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಗಳಿಗೆ ಆಕರ್ಷಿಸಲು 48 ವಿಶೇಷ ಮತಗಟ್ಟೆಗಳನ್ನು ರಚಿಸಿದ ಮತಗಟ್ಟೆ ಅಧಿಕಾರಿಗಳು ಹಾಗೂ ಯುವಸೌರಭ, ಸಖಿ ಸೌರಭ, ಜಾನಪದ ಸಾಂಪ್ರಾದಾಯಿಕ ಬೂಥ್‍ಗಳನ್ನು ನಿರ್ಮಿಸಿದ್ದ ಅಧಿಕಾರಿಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ನಂತರ ಸಹಿ ಸಂಗ್ರಹ ಅಭಿಯಾನ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ತಹಶೀಲ್ದಾರ್ ಗಿರಿಜ, ಜಿ.ಪಂ. ಮುಖ್ಯ ಯೋಜನಾಧಿಕಾರಿ ದೀಪಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ