*ದೇಶದ ಮಹಾನ್ ಸಾಧಕರ ಆದರ್ಶ ತತ್ವಸಿದ್ದಾಂತಗಳನ್ನು ಅಳವಡಿಸಿಕೊಳ್ಳಿ — ಮಹಮ್ಮದ್ ಅಸ್ಗರ್ ಮುನ್ನಾ*
ಚಾಮರಾಜನಗರ, ಜನವರಿ 21 ಅಂಬಿಗರ ಚೌಡಯ್ಯ, ವೇಮನ ಸೇರಿದಂತೆ ದೇಶದ ಎಲ್ಲಾ ಮಹಾನ್ ಸಾಧಕರ ಆದರ್ಶ ತತ್ವಸಿದ್ದಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಶಿವಶರಣ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ನಿರಂತರವಾಗಿ ಬದಲಾಗುವ ನೀರಿನ ಅಲೆಗಳ ನಡುವೆ ದೃಢಸಂಕಲ್ಪದಿಂದ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ಅಂಬಿಗರ ಚೌಡಯ್ಯ ಅವರು ರಚಿಸಿದ ವಚನಗಳ ಚಿಂತನೆ ಜನರಿಗೆ ಪ್ರೇರಣಾಶಕ್ತಿಯಾಗಿತ್ತು. ದೋಣಿ ನಡೆಸುತ್ತಲೇ ಜನರಿಗೆ ಕಾಯಕದ ಮಹತ್ವವನ್ನು ತಿಳಿಹೇಳಿದ ಅಂಬಿಗರ ಚೌಡಯ್ಯ ಅವರ ಆದರ್ಶ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸ ಆಗಬೇಕು. ಅವರ ತತ್ವಸಿದ್ದಾಂತಗಳಿಗೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಅಸ್ಗರ್ ಮುನ್ನಾ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಮಹತ್ವಪೂರ್ಣ ಬದಲಾವಣೆಗೆ ನಾಂದಿ ಹಾಡಿದ ಕಾಲವಾಗಿದೆ. ಅಂಬಿಗರ ಚೌಡಯ್ಯ ಅವರು 12ನೇ ಶತಮಾನದ ಪ್ರಸಿದ್ಧ ವಚನಕಾರರು ಹಾಗೂ ಸಮಾಜ ಸುಧಾರಕರಾಗಿದ್ದರು. ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಶಿವಶರಣರ ನಡುವೆ ತನ್ನದೇ ಛಾಪು ಮೂಡಿಸಿರುವ ಚೌಡಯ್ಯ ತಮ್ಮ ವಿವೇಚನಾಶಕ್ತಿ, ಆಳವಾದ ಅನುಭವದಿಂದ 278 ವಚನಗಳನ್ನು ರಚಿಸಿ ವಚನಾಂಕಿತ ಎಂಬ ಬಿರುದು ಪಡೆದಿದ್ದರು ಎಂದರು.
ಶಿವಶರಣರ ವಚನ ಸಂಸ್ಕøತಿಯು ಆಚಾರ-ವಿಚಾರ, ಸಂಪ್ರದಾಯಗಳಿಂದ ತುಂಬಿಹೋಗಿದ್ದ ಸಮಾಜಕ್ಕೆ ಚಲನಾಶೀಲತೆ ನೀಡಿತು ಎಂದರೆ ತಪ್ಪಾಗಲಾರದು. ವಚನಗಳನ್ನು ರಚಿಸಿ ನುಡಿದಂತೆ ನಡೆದ ಅಂಬಿಗರ ಚೌಡಯ್ಯ ಅವರು ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡಿ ಸದಾಚಾರದ ಹಾದಿಯಲ್ಲಿ ಬೆಳಕು ಚೆಲ್ಲಿದರು. ಅವರ ವಚನಗಳು ತರ್ಕಬದ್ಧ ಹಾಗೂ ಮಾನವ ಸಹಾನುಭೂತಿಯ ಪ್ರತಿಬಿಂಬವಾಗಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಅವರು ಮಾತನಾಡಿ 15ನೇ ಶತಮಾನದಲ್ಲಿ ಜೀವಿಸಿದ್ದ ವೇಮನ ಅವರು ಶ್ರೇಷ್ಠ ವಚನಕಾರರು ಆಗಿದ್ದರು. ಮಹಾಯೋಗಿ ವೇಮನ ಅವರು ಕನ್ನಡದಲ್ಲಿ ಸರ್ವಜ್ಞ ಹಾಗೂ ತಮಿಳಿನ ತಿರುವಳ್ಳೂರ್ ಅವರಂತೆ ತೆಲುಗು ಭಾಷೆಯಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಸರಳ ವಚನಗಳನ್ನು ರಚಿಸಿ ಜನರನ್ನು ಜಾಗೃತಗೊಳಿಸಿದರು. ಮಹಾನ್ ಸಮಾಜ ಸುಧಾರಕರಾಗಿ ಮನುಕುಲದ ಏಳಿಗೆಗಾಗಿ ಶ್ರಮಿಸಿದ ವೇಮನ ಅವರ ಮೌಲ್ಯಯುತ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಉದಯಕುಮಾರ್, ಕನ್ನಡಪರ ಚಳವಳಿ ಮುಖಂಡರಾದ ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು, ಸಮಾಜದ ಜಿಲ್ಲಾಧ್ಯಕ್ಷರಾದ ಪ್ರಕಾಶ್, ಮುಖಂಡರಾದ ಶ್ರೀನಿವಾಸ್, ಶ್ರೀಕಂಠ, ಈಶ್ವರ್, ಶಿವಣ್ಣ, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ