ತೂಬಗೆರೆ ಲೀಜನ್ ಘಟಕದ ಪದಾಧಿಕಾರಿಗಳ ಪದಗ್ರಹಣ
ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿಯ ಘಾಟಿ ಸುಬ್ರಹ್ಮಣ್ಯದ ಲಗುಮೇನಹಳ್ಳಿ ವೃತ್ತದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ತೂಬಗೆರೆ ಲೀಜನ್ ಘಟಕಕ್ಕೆ ನೂತನ ಲೀಜನ್ ನ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವನ್ನು ಆಯೋಜನೆ ಮಾಡಲಾಗಿತ್ತು.
ಘಟಕದ ನೂತನ ಅಧ್ಯಕ್ಷರಾಗಿ ಜಯ ಕಾಂತಮ್ಮ, ಉಪಾಧ್ಯಕ್ಷರಾಗಿ ಸವಿತಾ ಆನಂದ್, ಕಾರ್ಯದರ್ಶಿಯಾಗಿ ಸೌಮ್ಯ, ಖಜಾಂಜಿ ಶೋಭಾ ನಾರಾಯಣಸ್ವಾಮಿ ಸೇರಿದಂತೆ 20 ಮಂದಿ ಅಧಿಕಾರ ಸ್ವೀಕರಿಸಿದರು.
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ತೂಬಗೆರೆ ಲೀಜನ್ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಜಯ ಕಾಂತಮ್ಮ, ಹಿರಿಯ ನಾಗರೀಕರಿಗೆ ಈ ಸಂಸ್ಥೆ ಬಹಳ ಅವಶ್ಯಕತೆ ಇದೆ. ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಮಾನ ಮನಸ್ಕ, ಸಮಾಜ ಮುಖಿ ವ್ಯಕ್ತಿಗಳಿಗಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ, ತ್ಯಾಜ್ಯದ ವಿರುದ್ಧ ಸಮರ, ಪ್ಲಾಸ್ಟಿಕ್ ನಿರ್ಮೂಲನೆ, ಸಸಿ ನೆಡುವುದು ಕಲ್ಯಾಣಿ ಸ್ವಚ್ಛತೆ ಸೇರಿದಂತೆ ಇತರೆ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ನಂತರ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್ ಮಾತನಾಡಿ, ತೂಬಗೆರೆ ವ್ಯಾಪ್ತಿಯಯಲ್ಲಿ ಮಹಿಳೆಯರನ್ನು ಒಳಗೊಂಡ ಘಟಕವನ್ನು ಸ್ಥಾಪಿಸಬೇಕು ಎಂಬ ನಿರ್ಧಾರದಿಂದ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ತೂಬಗೆರೆ ಲೀಜನ್ ಗೆ ಸ್ಥಾಪಿಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಎಲ್ಲರೂ ಸೇವಾ ಮನೋಭಾವದಿಂದ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಮಾರ್ಚ್ 8-9ರಂದು ಉಡುಪಿಯಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯುತ್ತದೆ. ಇದರಲ್ಲಿ ಎಲ್ಲರೂ ಭಾಗವಹಿಸಿ ಸಮ್ಮೇಳನದ ಸದುಪಯೋಗಪಡಿಸಿ ಕೊಳ್ಳಬೇಕು. ಎಲ್ಲರಲ್ಲೂ ನಾಯಕತ್ವ ಇದೆ, ಅದನ್ನು ಹೊರತರಲು ಇಂತಹ ವೇದಿಕೆಗಳು ಅತ್ಯಗತ್ಯ ವಾಗಿರುತ್ತವೆ ಎಂದರು.
ನಂತರ ಉಪಾಧ್ಯಕ್ಷ ಡಾ.ಎಂ ಶಿವಕುಮಾರ್ ಮಾತನಾಡಿ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಭಾರತದಲ್ಲಿ ಸ್ಥಾಪನೆಗೊಂಡು “ಜವಾಬ್ದಾರಿಯುತ ಮತ್ತು ಸಕ್ರಿಯ ಪೌರತ್ವದ” ಧೈಯ ವಾಕ್ಯ ದೊಂದಿಗೆ ವಿಶ್ವ ದೆಲ್ಲಡೆ ಪಸರಿಸುತ್ತಿರುವ ಪ್ರಪ್ರಥಮ ಸ್ವಯಂ ಸೇವಾ ಸಂಸ್ಥೆ ಇದಾಗಿದೆ. ಈ ವಿಶಿಷ್ಟ ಜೂನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ 40 ವಯಸ್ಸು ದಾಟಿದ ಹಿರಿಯ ಜೇಸಿಗಳು ಮತ್ತು ಸಮಾನ ಮನಸ್ಕ ಸಮಾಜ ಮುಖಿ ವ್ಯಕ್ತಿ ಗಳಿಗಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದೆ, ಇದು ವಿಶ್ವದ ಅತಿದೊಡ್ಡ ಸಮುದಾಯ ಸೇವಾ ಸಂಸ್ಥೆಯಾಗಿದೆ ಎಂದರು.
ಈ 27 ವರ್ಷಗಳಲ್ಲಿ ಸೀನಿಯರ್ ಛೇಂಬರ್ ನಮ್ಮ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅಶಕ್ತರು, ಸಮಾಜದ ದುರ್ಬಲ ವರ್ಗದವರಿಗೆ ಸಹಾಯಸ್ತ, ಅಂಗವಿಕಲರಿಗೆ ನೆರವು, ಮಹಿಳಾ ಸಬಲೀಕರಣಕ್ಕಾಗಿ ಹೊಲಿಗೆ ಯಂತ್ರಗಳು, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಬೋಧನಾ ಸಾಧನಗಳು, ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ತಲಾ ವಿದ್ಯಾರ್ಥಿ ವೇತನಗಳ ವಿತರಣೆ ಮಾಡಿ ಸಮುದಾಯದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ತನ್ನದೆ ಛಾಪನ್ನು ಮೂಡಿಸುತ್ತಿದೆ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಟಿ.ರಂಗಪ್ಪ, ವಿಜಯಪುರ ಲೀಜನ್ ನ ಅಧ್ಯಕ್ಷ ಕೆ.ವೆಂಕಟೇಶ್, ರಾಷ್ಟ್ರೀಯ ಸಂಯೋಜಕರಾದ ಅಕ್ಷತಾ, ಎಂ.ಆರ್, ಜಯೇಶ್, ಉಪಾಧ್ಯಕ್ಷೆ ಸವೀತಾ ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.