ಕಾರ್ಮಿಕರು ಈ ದೇಶದ ಆಸ್ತಿ–ಶಾಸಕ ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರ, ಜನವರಿ 07 ಕಾರ್ಮಿಕರು ಈ ದೇಶದ ಆಸ್ತಿಯಾಗಿದ್ದಾರೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ (ಜ.06) ದಂದು ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಎಲೆಕ್ಟ್ರಿಷಿಯನ್ ವೆಲ್ಡಿಂಗ್ ಮತ್ತ್ತು ಮೇಷನ್ ಕಾರ್ಮಿಕರಿಗೆ ಟೂಲ್ ಕಿಟ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ಕಾರ್ಮಿಕರಲ್ಲಿ ಎರಡು ವರ್ಗಗಳಿವೆ. ಒಂದು ಸಂಘಟಿತ ಕಾರ್ಮಿಕರು ಮತ್ತೊಂದು ಅಸಂಘಟಿತ ಕಾರ್ಮಿಕರು. ಸಂಘಟಿತ ಕಾರ್ಮಿಕರಿಗೆ ಸರ್ಕಾರ ಎಲ್ಲ ರೀತಿಯ ಸಾಮಾಜಿಕ ಭದ್ರತೆಗಳನ್ನು ನೀಡುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಇಂತಹ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಅವರಿಗೆ ಪ್ರತಿದಿನ ಕೂಲಿಯು ಸಿಗದಂತಹ ಪರಿಸ್ಥಿತಿ ಇದೆ ಹಾಗೂ ಯಾವುದೇ ಸಾಮಾಜಿಕ ಭದ್ರತೆಯೂ ಇಲ್ಲ ಎಂದರು.
ಕಾರ್ಮಿಕ ಇಲಾಖೆಯು ಕಟ್ಟಡ ಮತ್ತು ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರಿಗೆ ನೋಂದಣಿ ಮಾಡಿಸುವ ಜೊತೆಗೆ ಇಲಾಖೆ ವತಿಯಿಂದ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಕಾರ್ಮಿಕರು ಇದರ ಉಪಯೋಗ ಪಡೆದುಕೊಂಡು ಅಭಿವೃದ್ದಿ ಹೊಂದಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರವು ವಿವಿಧ ವಲಯಗಳನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿದ್ದು ನೋಂದಣಿ ಮಾಡಿಸುವ ಕಾರ್ಯ ಆರಂಭವಾಗಿದೆ. ಜಿಲ್ಲೆಯ ಎಲ್ಲಾ ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಳ್ಳುವಂತೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತಾ ಅವರು ಮಾತನಾಡಿ ಕಾರ್ಮಿಕ ಇಲಾಖೆಯು ಕಾರ್ಮಿಕರ ಅಭಿವೃದ್ದಿಗಾಗಿ ಹಲವಾರು ಸೌಲಭ್ಯ ನೀಡುತ್ತಿದೆ. ಕಾರ್ಮಿಕರು ಇಲಾಖೆಯನ್ನು ನೇರವಾಗಿ ಸಂಪರ್ಕಿಸಿ ನೊಂದಣಿ ಮಾಡಿಸಿಕೊಂಡು ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗಬಾರದು. ಎಲ್ಲ ತಾಲ್ಲೂಕುಗಳಲ್ಲೂ ಕಾರ್ಮಿಕ ನಿರೀಕ್ಷಕರ ಕಚೇರಿ ಇದ್ದು ಕಾರ್ಮಿಕರು ನೇರವಾಗಿ ಇಲಾಖೆಯನ್ನು ಸಂಪರ್ಕಿಸಿ ಸೌಲಭ್ಯ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಮೇಷನ್ ಎಲೆಕ್ಟ್ರೀಷಿಯನ್ ವೆಲ್ಡಿಂಗ್ ಕಾರ್ಮಿಕರಿಗೆ ಟೂಲ್ ಕಿಟ್ ಹಾಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಸಿನಿ ಕಾರ್ಮಿಕರು, ಕ್ಷೌರಿಕರು, ಮೋಟಾರ್ ಸಾರಿಗೆ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು.
ಹಿರಿಯ ಕಾರ್ಮಿಕ ನಿರೀಕ್ಷಕರಾದ ವಿ.ಎಲ್. ಪ್ರಸಾದ್, ಯೋಜನಾ ನಿರ್ದೇಶಕರಾದ ಮಹೇಶ್, ಕಟ್ಟಡ ಮತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ರಾಜೇಶ್, ಅಸಂಘಟಿತ ಕಾರ್ಮಿಕ ಮಂಡಳಿಯ ಶ್ರೀಧರ್, ನಾಗರತ್ನ, ಪ್ರದೀಪ್ ಕುಮಾರ್, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ- ಉಮೇಶ್ ಮೈಲಾರಪಾಳ್ಯ