ಬಿಳಿಗಿರಿ ರಂಗನಾಥಸ್ವಾಮಿ ರಥೋತ್ಸವಕ್ಕೆ ಸಿದ್ದತೆ ಕೈಗೊಳ್ಳಲು ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚನೆ

ಚಾಮರಾಜನಗರ:ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಜನವರಿ 15 ರಂದು ನಡೆಯಲಿರುವ ಸಂಕ್ರಾಂತಿ ರಥೋತ್ಸವ ಚಿಕ್ಕಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಳಿಗಿರಿರಂಗನಬೆಟ್ಟದ ಅತಿಗಣ್ಯರ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಂಕ್ರಾಂತಿ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಕ್ರಾಂತಿ ಹಬ್ಬದ ಮರುದಿನ ಬೆಟ್ಟದಲ್ಲಿ ಚಿಕ್ಕತೇರು ನಡೆಯುತ್ತದೆ. ಈ ಬಾರಿ ಜ. 15 ರ ಬುಧವಾರ ಮಧ್ಯಾಹ್ನ 11.55 ರಿಂದ 12.06 ರೊಳಗೆ ಸಲ್ಲುವ ಮೀನಾ ಲಗ್ನದಲ್ಲಿ ರಥಾರೋಹಣ ಆರಂಭವಾಗಲಿದೆ.
ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಭಕ್ತರಿಗೆ ತೊಂದರೆಯಾಗದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕುಡಿಯುವ ನೀರು, ನಿರಂತರ ವಿದ್ಯುತ್,ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಕೆಎಸ್ಆರ್ಟಿಸಿ ವತಿಯಿಂದ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳನ್ನು ನಿಯೋಜಿಸಬೇಕು. ನಾನಾ ಭಾಗಗಳಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುವುದರಿಂದ ಯಾವುದೇ ಕೊರತೆಯಾಗದಂತೆ ಬಸ್ಸುಗಳನ್ನು ಹಾಕಬೇಕು ಎಂದು ಶಾಸಕರು ತಿಳಿಸಿದರು.

ನಾಲ್ಕು ಚಕ್ರದ ವಾಹನಗಳಲ್ಲಿ ಬರುವ ಭಕ್ತರು ನಿಗಧಿಯಾಗಿರು ಸ್ಥಳದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ದೇಗುಲಕ್ಕೆ ತೆರಳಲು ವಿಶೇಷ ಬಸ್‍ಗಳನ್ನು ಬಿಡಲಾಗುವುದು ಎಂದು‌ ತಿಳಿಸಿದರು.

ಈ ಬಾರಿಯೂ ಬೆಟ್ಟಕ್ಕೆ ರಥೋತ್ಸವದಂದು ಸಂಚಾರ ದಟ್ಟಣೆಯನ್ನು ತಡೆಗಟ್ಟಲು ದ್ವಿಚಕ್ರ, ತ್ರಿಚಕ್ರ ಹಾಗೂ ಗೂಡ್ಸ್ ವಾಹನಗಳನ್ನು ನಿಷೇಧಿಸಲಾಗಿದೆ. ಇದರಲ್ಲಿ ಬರುವ ಭಕ್ತರು ತಾಲೂಕಿನ ಅರಣ್ಯ ಇಲಾಖೆಯ ಗುಂಬಳ್ಳಿ ಚೆಕ್ ಪೋಸ್ಟ್ ಬಳಿ ತಮ್ಮ ವಾಹನ ನಿಲ್ಲಿಸಿ ಬಸ್‍ಗಳಲ್ಲೇ ತೆರಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಹೆಚ್ಚವರಿ ಜಿಲ್ಲಾಧಿಕಾರಿ ಗೀತಾಹುಡೇದ, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಉಪಾಧ್ಯಕ್ಷರಾದ ಕಿನಕಹಳ್ಳಿ ಪ್ರಭುಪ್ರಸಾದ್, ತಹಶೀಲ್ದಾರ್ ಜಯಪ್ರಕಾಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿವೈಎಸ್‍ಪಿ ಎಂ. ಧರ್ಮೇಂದ್ರ, ಸಿಪಿಐ ಕೆ. ಶ್ರೀಕಾಂತ್, ಆರ್‍ಎಫ್‍ಒ ನಾಗೇಂದ್ರನಾಯಕ ಬಿಳಿಗಿರಿ ರಂಗನ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‍ಕುಮಾರ್, ಪಾರುಪತ್ತೇದಾರರಾದ ರಾಜು, ಶೇಷಾದ್ರಿ, ಅರ್ಚಕರಾದ ರವಿಕುಮಾರ್, ಎಸ್. ನಾಗೇಂದ್ರಭಟ್,ದೇವಾಲಯದ ವ್ಯವಸ್ಥಪನಾ ಸಮಿತಿ ಸದಸ್ಯರಾದ ರಾಜಣ್ಣ, ಜೆ. ಶ್ರೀನಿವಾಸ್, ಕೇತಮ್ಮ, ಸ್ಪೂರ್ತಿ, ವೆಂಕಟರಾಮು, ಸಿದ್ದರಾಜು, ಎಂ. ಸುರೇಶ್, ವಿ. ನಾರಾಯಣಸ್ವಾಮಿ ಪಿಎಸ್‍ಐ ಹನುಮಂತ ಉಪ್ಪಾರ್, ವೆಂಕಟೇಶ್, ಗ್ರಾಮಪಂಚಾಯತ್ ಅಧ್ಯಕ್ಷರಾದ ಸಿ.ಡಿ. ಮಹದೇವ, ಸದಸ್ಯರಾದ ಪ್ರತೀಪ್‍ಕುಮಾರ್, ಸಾಕಮ್ಮ ಸೇರಿದಂತೆ ಇತರರು ಸಭೆಯಲ್ಲಿ‌ ಉಪಸ್ಥಿತರಿದ್ದರು.

ವರದಿ-ಉಮೇಶ್ ಮೈಲಾರಪಾಳ್ಯ