ಕುವೆಂಪು ಎಲ್ಲಾ ಯುಗಗಳಿಗೂ ಸಲ್ಲುವ ಶ್ರೇಷ್ಠ ಕವಿ–ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಭಿಮತ
ಚಾಮರಾಜನಗರ, ಜನವರಿ 07 ರಾಷ್ಟ್ರಕವಿ ಕುವೆಂಪು ಅವರು ಇಡೀ ಜಗತ್ತಿಗೆ ವಿಶ್ವಮಾನವ ಸಂದೇಶವನ್ನು ನೀಡುವ ಮೂಲಕ ಎಲ್ಲಾ ಯುಗಗಳಿಗೂ ಸಲ್ಲುವ ಶ್ರೇಷ್ಠ ಕವಿಯಾಗಿದ್ದಾರೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿದ್ದ ಜಗದ ಕವಿ, ಯುಗದ ಕವಿ ಕುವೆಂಪು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಅನೇಕ ಮೌಲ್ಯಯುತ ಕಥೆ, ಕವನ, ಕಾದಂಬರಿಗಳನ್ನು ರಚಿಸುವ ಮೂಲಕ ಕುವೆಂಪು ಅವರು ಕನ್ನಡ ಭಾಷೆ, ಸಂಸ್ಕøತಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕುವೆಂಪು ಅವರು ಕಥೆ, ಕವನಗಳಿಗೆ ಸೀಮಿತವಾಗಿರದೇ ಹಲವಾರು ವಿಮರ್ಶಾತ್ಮಕ ಹಾಗೂ ವೈಚಾರಿಕತೆಯ ಲೇಖನಗಳನ್ನು ರಚಿಸಿದ್ದಾರೆ. ಅವರು ನೀಡಿದ ವಿಶ್ವಮಾನವ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ಅವರು ಅಭಿಪ್ರಾಯಪಟ್ಟರು.
ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಕನ್ನಡದ ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಕುವೆಂಪು ಒಬ್ಬರಾಗಿದ್ದಾರೆ. ಕುವೆಂಪು ಅವರ ವಿಶ್ವಮಾನವ ಸಂದೇಶ ಸಾರ್ವಕಾಲಿಕವಾಗಿದೆ. ಕುವೆಂಪು ಅವರ ಅರ್ಥಪೂರ್ಣ ಚಿಂತನೆ, ಆದರ್ಶಗಳನ್ನು ಅನುಸರಿಸಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ ಪ್ರಸನ್ನ ಅವರು ಮಾತನಾಡಿ ಕುವೆಂಪು ಅವರು 20ನೇ ಶತಮಾನದ ಕನ್ನಡದ ಬಹುದೊಡ್ಡ ಕವಿಯಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಅವರು ರಚಿಸದ ಕಥೆ, ಕವನಗಳಿಲ್ಲ ಎಂದರೇ ತಪ್ಪಾಗಲಾರದು. ಕಥೆ, ಕವಿತೆ, ಕಾದಂಬರಿ, ನಾಟಕಕಾರ, ವಿಮರ್ಶಕರು, ಆತ್ಮಕಥನ, ಜೀವನ ಚರಿತ್ರೆ, ವೈಚಾರಿಕ ಲೇಖನಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಕುವೆಂಪು ತಮ್ಮದೇ ಛಾಪು ಮೂಡಿಸಿದ್ದಾರೆ. ಇವೆಲ್ಲವೂ ಈ ದೇಶದ ಸಾಮಾಜಿಕ ಹಿನ್ನೆಲೆಯಲ್ಲಿ ರಚಿತವಾಗಿವೆ ಎಂದು ತಿಳಿಸಿದರು.
ಕನ್ನಡದ ಮೇರುಕೃತಿ ಶ್ರೀ ರಾಮಾಯಣ ದರ್ಶನಂ ರಚಿಸಿದ ಕುವೆಂಪುರವರು 1963ರಲ್ಲಿ ಜ್ಞಾನಪೀಠ ಪುರಸ್ಕøತರಾದರು. ರಾಮಾಯಣದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗತ ಪಾತ್ರಗಳ ಮೌಲ್ಯವನ್ನು ಅತ್ಯುತ್ತಮವಾಗಿ ಜನರಿಗೆ ಮನವರಿಕೆ ಮಾಡಿದ್ದಾರೆ. ಸ್ತ್ರೀಪರ ಧೋರಣೆಗೆ ಮಹತ್ವ ನೀಡಿದ್ದಾರೆ. ರಾಮಾಯಣದಲ್ಲಿ ತಂದೆ-ತಾಯಿ, ಅಣ್ಣ-ತಮ್ಮ, ಸಹೋದರತ್ವದ ಪ್ರಾಮುಖ್ಯತೆ ತಿಳಿಸಿ ಸಾಮಾನ್ಯದಲ್ಲಿ ಅಸಾಮಾನ್ಯತೆ ಕಂಡವರು ಕುವೆಂಪು. ಓ ನನ್ನ ಚೇತನ, ಆಗು ನೀ ಅನಿಕೇತನ ಕವಿತೆ ರಚಿಸಿ ಕನ್ನಡಕ್ಕೆ ವಿಶ್ವಮಾನ್ಯತೆ ತಂದುಕೊಟ್ಟವರು ಕುವೆಂಪು ಆಗಿದ್ದಾರೆ ಎಂದು ಮಂಜುನಾಥ ಪ್ರಸನ್ನ ಅವರು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಂವಿಧಾನ ಪೀಠಿಕೆ ಬೋಧಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್, ಬಿಆರ್‍ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್ ಕುಮಾರ್, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಉದಯಕುಮಾರ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಮುಖಂಡರು ಕಾರ್ಯಕ್ರಮದಲ್ಲಿ ಇದ್ದರು.
ವರದಿ ಉಮೇಶ್ ಮೈಲಾರಪಾಳ್ಯ