ಹಿರಿಯ ಹೋರಾಟಗಾರರನ್ನು ಅಭಿನಂದಿಸುತ್ತಿರುವ ಕಾರ್ಯ ಶ್ಲಾಘನೀಯ–ಜಿ. ಸತ್ಯನಾರಾಯಣ

ದೊಡ್ಡಬಳ್ಳಾಪುರ:ಕನ್ನಡದ ಹೋರಾಟಗಳ ಬಗ್ಗೆ ಚಿಂತನ ಮಂತನ ಸಭೆ ನಡೆಯಬೇಕು. ಕನ್ನಡ ಜಾಗೃತ ಪರಿಷತ್ತು ಇದರ ನೇತೃತ್ವ ವಹಿಸಬೇಕು. ಇದರಲ್ಲಿ ಎಲ್ಲಾ ಕನ್ನಡ ಪರ ಹೋರಾಟಗಾರರು ಸ್ವ ಇಚ್ಛೆಯಿಂದ ಭಾಗವಹಿಸಬೇಕು ಎಂದು ಎಂದು ಕನ್ನಡ ಜಾಗೃತ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ. ಸತ್ಯನಾರಾಯಣ ಹೇಳಿದರು.
ಸುವರ್ಣ ಕರ್ನಾಟಕ ಮಹೋತ್ಸವ ಹಾಗೂ ರಾಷ್ಟ್ರ ಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಕನ್ನಡ ಜಾಗೃತ ಪರಿಷತ್ ಹಮ್ಮಿಕೊಂಡಿದ್ದ ಹಿರಿಯ ಕನ್ನಡ ಪರ ಹೋರಾಟಗಾರರ ಸ್ವಾಭಿಮಾನಿ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸತ್ಯ ನಾರಾಯಣ ದಶಕಗಳ ಇತಿಹಾಸ ಹೊಂದಿದ ಕನ್ನಡ ಜಾಗೃತ ಪರಿಷತ್ ಕಾರ್ಯಕ್ರಮಗಳಿಗೆ ನಾಡಿನ ಎಲ್ಲಾ ಕನ್ನಡಪರ, ರೈತಪರ, ದಲಿತಪರ, ಪ್ರಗತಿಪರ ಚಿಂತಕರಾದ ವಾಟಾಳ್ ನಾಗರಾಜ್, ಎಂ ಡಿ. ನಂಜುಂಡಸ್ವಾಮಿ, ವಡ್ಡರ್ಸೆ ರಘುರಾಮ್ ಶೆಟ್ಟಿ, ಕೋಟ ಶಿವರಾಮ್ ಕಾರಂತ, ಚಿದಾನಂದ ಮೂರ್ತಿ, ವೆಂಕಟ ಸ್ವಾಮಿ, ಪಾಟೀಲ್ ಪುಟ್ಟಪ್ಪ, ಚಂಪಾ, ಜಿ. ಎಸ್. ಶಿವರುದ್ರಪ್ಪ, ಪುಂಡಲೀಕ ಹಾ ಲಂಬಿ ಇನ್ನೂ ಅನೇಕ ಮಹನೀಯರು ಭಾಗವಹಿಸಿದ್ದಾರೆ. ಡಾ. ವೆಂಕಟರೆಡ್ಡಿ ರವರ ಕನಸಿನ ಕೂಸಾದ ಕನ್ನಡ ಜಾಗೃತ ಭವನ ಮೇಲ್ಕಂಡ ಮಹನೀಯರ ಭೇಟಿಗೆ ಸಾಕ್ಷಿಯಾಗಿದೆ. ಕನ್ನಡ ಜಾಗೃತ ಪರಿಷತ್ತಿನ ಹೋರಾಟಗಳಿಂದ ನನ್ನಂತ ಅದೆಷ್ಟೋ ಜನ ಹೊರಹೊಮ್ಮಿದ್ದಾರೆ. ಇದರಲ್ಲಿ ಡಾ. ವೆಂಕಟರೆಡ್ಡಿ ರವರ ಪರಿಶ್ರಮ ಅಪಾರವಾದುದು. ಜೊತೆಗೆ ಆಗಿನ ಹೋರಾಟಗಾರರ ಪಲಾಪೇಕ್ಷೆ ಇಲ್ಲದ ನಿರಂತರ ಹೋರಾಟ ನಿಜಕ್ಕೂ ಅನನ್ಯವಾದುದು. ಇಂದು ಅಂತಹ ಹೋರಾಟಗಾರರು ತೆರೆಮರೆಗೆ ಸರಿದಿದ್ದಾರೆ. ಕೆಲವರು ನಮ್ಮೊಂದಿಗಿಲ್ಲ. ಈಗಿರುವ ಹಿರಿಯ ಹೋರಾಟಗಾರರನ್ನು ಗುರ್ತಿಸಿ ಅವರಿಗೆ ಸ್ವಾಭಿಮಾನದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸುತ್ತಿರುವ ಕನ್ನಡ ಜಾಗೃತ ಪರಿಷತ್ತಿನ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ನಗರಸಭಾ ಸದಸ್ಯ ತನ ಪ್ರಭುದೇವ್ ಗೋಕಾಕ್ ವರದಿ ಹೋರಾಟಕ್ಕೂ ಮುನ್ನಾ ದೊಡ್ಡಬಳ್ಳಾಪುರದಲ್ಲಿ ಭುವನೇಶ್ವರಿ ಕನ್ನಡಸಂಘ ಹಾಗೂ ಡಾ. ರಾಜಕುಮಾರ್ ಅಭಿಮಾನಿ ಸಂಘ ಮಾತ್ರವಿದ್ದು ಕನ್ನಡ ಚಿತ್ರಗಳನ್ನು ಹಾಗೂ ನಟರನ್ನು ಅರಾದಿಸುವ ಅಭಿಮಾನಿಗಳಾಗಿದ್ದು ಗೋಕಾಕ್ ವರದಿ ಹೋರಾಟದ ಪ್ರಾರಂಭಕ್ಕೆ ಊರಿನ ಎಲ್ಲಾ ಭಾಷಾ ಪ್ರೇಮಿಗಳು ಒಗ್ಗೂಡಿ ಡಾ. ವೆಂಕಟರೆಡ್ಡಿ ನೇತೃತ್ವದಲ್ಲಿ ಕನ್ನಡ ಕ್ರಿಯಾ ಸಮಿತಿ ರಚಿಸಿ ಹೋರಾಟಕ್ಕಿಳಿದು ಇಡೀ ರಾಜ್ಯವೇ ನೋಡುವಂತ ಹೋರಾಟ ಮಾಡಿದ್ದು ಇತಿಹಾಸ. ಅದು ಎಷ್ಟರ ಮಟ್ಟಿಗೆ ಎಂದರೆ ಕನ್ನಡಪರ ಹೋರಾಟಗಳಲ್ಲಿ ಅದರಲ್ಲೂ ಗೋಕಾಕ್ ಹೋರಾಟದಲ್ಲಿ ಧಾರವಾಡ ಮಂಚೂಣಿಯಲ್ಲಿತ್ತು. ನಂತರದ ಸ್ಥಾನ ದೊಡ್ಡಬಳ್ಳಾಪುರವೆಂದರೆ ನಮ್ಮ ಹೋರಾಟಗಾರರ ಹೋರಾಟದ ತೀವ್ರತೆ ಎಷ್ಟಿತ್ತೆಂದೂ ಈಗಿನ ಹೋರಾಟಗಾರರಿಗೆ ಗೊತ್ತಿಲ್ಲ. ಹಾಗಾಗಿ ದೊಡ್ಡಬಳ್ಳಾಪುರವನ್ನು ಎರಡನೇ ಧಾರವಾಡ ಎಂದು ರಾಜ್ಯದ ಆಗಿನ ಕವಿಗಳು, ಸಾಹಿತಿಗಳು ಹೋರಾಟಗಾರರುಗುರುತಿಸಿದ್ದು ದೊಡ್ಡಬಳ್ಳಾಪುರ ಹೋರಾಟಗಾರರ ನೈಜ ಹೋರಾಟಕ್ಕೆ ಹಿಡಿದ ಕನ್ನಡಿಯಾಗಿದೆ. ಗೋಕಾಕ್ ವರದಿ ನಂತರ ಕನ್ನಡ ಜಾಗೃತ ಪರಿಷತ್ತಾಗಿ ಪರಿವರ್ತನೆ ಗೊಂಡು ಅಂದಿನಿಂದ ಇಂದಿನವರೆಗೂ ಆಡು ಮುಟ್ಟದ ಸೊಪ್ಪಿಲ್ಲ. ಕನ್ನಡಜಾಗೃತ ಪರಿಷತ್ ಮಾಡದ ಹೋರಾಟವಿಲ್ಲ ಎಂಬ ಮಾತಿದೆ. ಇಂದು ಕನ್ನಡಪರ ಹೋರಾಟಗಳಿಗೆ ದೊಡ್ಡಬಳ್ಳಾಪುರ ತವರೂರು ಎಂಬ ಹೆಸರಿದೆ ಎಂದರೆ ಅಂದಿನ ಹೋರಾಟಗಾರರ ಪ್ರಾಮಾಣಿಕ ಹೋರಾಟ ಪ್ರಮುಖ ಕಾರಣ ಎನ್ನಬಹುದು. ಹಾಗಾಗಿ ಅಂತಹ ಹೋರಾಟ ನಡೆಸಿ ಇಂದು ತೆರೆಮರೆಯಲ್ಲಿರುವ ಹಿರಿಯ ಹೋರಾಟಗಾರರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿರುವ ಕನ್ನಡಜಾಗೃತ ಪರಿಷತ್ತಿನ ಕಾರ್ಯ ಪ್ರಬುದ್ಧವಾದುದು ಎಂದು ಕ. ಜ. ಪ. ಬೆಳೆದುಬಂಧ ಹಾದಿಯನ್ನು ಎಳೆ ಎಳೆಯಾಗಿ ಪ್ರಭುದೇವ್ ಹೇಳಿದರು.

ದಲಿತ ಪರ ಚಿಂತಕ ಮಾ. ಮುನಿರಾಜು ಮಾತನಾಡಿ ಡಾ. ವೆಂಕಟರೆಡ್ಡಿ ರವರ ಶ್ರಮದ ಪಲವಾಗಿ ನೂರಾರು ಹೋರಾಟಗಾರರು ರೂಪು ಗೊಂಡು ಕನ್ನಡ ಜಾಗೃತ ಭವನದ ಸ್ಥಾಪನೆಗೆ ಕಾರಣರಾದರು. ಧಾರವಾಡದ ವಿದ್ಯಾವರ್ಧಕ ಸಂಘ ಬಿಟ್ಟರೆ ಕನ್ನಡದ ಸ್ವಂತ ಭವನ ಇರುವುದು ದೊಡ್ಡಬಳ್ಳಾಪುರದಲ್ಲಿ ಮಾತ್ರ ಎಂಬುದು ಹೆಮ್ಮೆಯ ವಿಚಾರ. ಕನ್ನಡ ಜಾಗೃತ ಪರಿಷತ್ತಿನ ಹೋರಾಟಕ್ಕೆ ಹಾಗೂ ಜಾಗೃತ ಭವನದ ನಿರ್ಮಾಣಕ್ಕೆ ದಾನಿಗಳ ಜೊತೆಗೆ ಅದೆಷ್ಟೋ ಕನ್ನಡ ಮನಸುಗಳ ಶ್ರಮದ ಬೆವರಿದೆ. ಇಂದು ನಾನು ಇಲ್ಲಿ ಮಾತನಾಡುತ್ತಿದ್ದೇನೆಂದರೆ ಅದಕ್ಕೆ ಕಾರಣ ಕನ್ನಡ ಜಾಗೃತ ಪರಿಷತ್ತು. ದೊಡ್ಡಬಳ್ಳಾಪುರ ಹೋರಾಟಗಾರರ ಮೂಲ ಬೇರು ಕನ್ನಡ ಜಾಗೃತ ಪರಿಷತ್ತು. ಇಂದು ಅಂದಿನ ಕಾಲದಲ್ಲಿ ಹೋರಾಟ ಮಾಡಿ ತೆರೆಮರೆಗೆ ಸರಿದಿದ್ದ ಹೋರಾಟಗಾರರನ್ನು ಗುರ್ತಿಸಿ ಅಭಿನಂದಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಜೊತೆಗೆ ಅಶಕ್ತ ಹೋರಾಟಗಾರರಿಗೆ ಹೋರಾಟಗಾರರ ಜೊತೆ ಕನ್ನಡ ಜಾಗೃತ ಪರಿಷತ್ತು ಎಂಬ ಯೋಜನೆಯಡಿ ಹೋರಾಟಗಾರರಿಗೆ ಮಾಶಾಸನ ದಂತ ಯೋಜನೆ ರೂಪಿಸಿರುವುದಕ್ಕೆ ಕಾರಣರಾದ ಪರಿಷತ್ತಿನ ಅಧ್ಯಕ್ಷ, ಕಾರ್ಯದರ್ಶಿಗಳಾದ ವೆಂಕಟೇಶ್ ಹಾಗೂ ಆಂಜಿನೇಯ ರವರು ಅಭಿನಂದನಾರ್ಹರು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಗೋಕಾಕ್ ವರದಿ ಹೋರಾಟ ಹಾಗೂ ಕನ್ನಡ ಜಾಗೃತ ಪರಿಷತ್ತಿನ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಐವತ್ತಕ್ಕೂ ಹೆಚ್ಚು ಹಿರಿಯ ಹೋರಾಟಗಾರರನ್ನು ಗೌರವಿಸಲಾಯಿತು. ಜೊತೆಗೆ ಹದಿನೈದು ಜನ ಅಶಕ್ತ ಹೋರಾಟಗಾರರಿಗೆ ಗೌರವ ದನವನ್ನು ನೀಡುವುದರೊಂದಿಗೆ ಅಶಕ್ತ ಹೋರಾಟಗಾರರ ಜೊತೆ ಕನ್ನಡ ಜಾಗೃತ ಪರಿಷತ್ತು ಎಂಬ ನೂತನ ಯೋಜನೆಗೆ ಚಾಲನೆ ನೀಡಲಾಯ್ತು

ಕಾರ್ಯಕ್ರಮದಲ್ಲಿ ಕನ್ನಡ ಜಾಗೃತ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎ. ಓ ಅವಲಮೂರ್ತಿ, ಲಲಿತ್ ಕುಮಾರ್ ಜೈನ್, ಮಹಾಬಲೇಶ್ವರ್, ಅದ್ದೆ ಮಂಜುನಾಥ್, ಸಂಜೀವ್ ನಾಯಕ್, ಪ್ರಮೀಳಾ ಮಹದೇವ್, ಸು. ನರಸಿಂಹ ಮೂರ್ತಿ, ಸುಲೋಚನಮ್ಮ ವೆಂಕಟರೆಡ್ಡಿ, ರಾಮಾಂಜಿನಪ್ಪ, ರೈಲ್ವೆಸ್ಟೇಷನ್ ಮಲ್ಲೇಶ್, ಕ ಜಾ. ಪ. ಅಧ್ಯಕ್ಷರಾದ ಕೆ ವೆಂಕಟೇಶ್, ಕಾರ್ಯದರ್ಶಿ ಆಂಜನೇಯ ಸೇರಿದಂತೆ ಕನ್ನಡ ಜಾಗೃತ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು.