ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವವರೆಗೂ ಬಿಜೆಪಿ ಹೋರಾಟ ನಿಲ್ಲುವುದಿಲ್ಲ–ದೊಡ್ಡೇರಿ ವೆಂಕಟೇಶ್

ದೊಡ್ಡಬಳ್ಳಾಪುರ:ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರ ಎದ್ದು ಕಾಣುತ್ತಿದೆ. ಇದರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಿಯಾಂಕ್ ಖರ್ಗೆ ಯವರ ರಾಜೀನಾಮೆ ಪಡೆಯ ಬೇಕಿತ್ತು. ಆದರೆ ಪ್ರಿಯಾಂಕ್ ಪರವಾಗಿ ಇಡೀ ಕಾಂಗ್ರೆಸ್ ಸರ್ಕಾರ ನಿಂತಿದೆ. ಇದನ್ನು ಖಂಡಿಸಿ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಬೂತ್ ಮಟ್ಟದಿಂದ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ವಕ್ತಾರ ದೊಡ್ಡೇರಿ ವೆಂಕಟೇಶ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ದೊಡ್ಡೇರಿ ವೆಂಕಟೇಶ್ ಮಾತನಾಡಿ ಈಗಾಗಲೇ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದಾಗಿ ಹಲವಾರು ಜನ ಗುತ್ತಿಗೆ ದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮ ಹತ್ಯೆ ಪ್ರಕರಣ ಪ್ರಮುಖವಾದುದು. ಸಚಿನ್ ಆತ್ಮಹತ್ಯೆಗೆ ಪ್ರಮುಖ ಕಾರಣ ಸಚಿವ ಪ್ರಿಯಾಂಕ್ ಖರ್ಗೆಯ ಆಪ್ತ ಸಹಾಯಕ ರಾಜು ಕಪನೂರ. ಸಚಿನ್ ಪಾಂಚಾಳ ಆತ್ಮಹತ್ಯೆಯ ಡೆತ್ ನೋಟ್ ನಲ್ಲಿ ರಾಜು ಕಪನೂರರ ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇಷ್ಟೆಲ್ಲ ಸಾಕ್ಷಿ ಇದ್ದರು ಕೂಡಾ ರಾಜು ಕಪನೂರರ ಮೇಲೆ ಪೊಲೀಸರು ಕ್ರಮ ಕೈಗೊಂಡಿಲ್ಲ. ಖುದ್ದು ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಿ ಕಪನೂರರ ರಕ್ಷಣೆಗೆ ನಿಂತಿದ್ದಾರೆ. ಆದ್ದರಿಂದ ಗುತ್ತಿಗೆದಾರರ ಆತ್ಮಹತ್ಯೆಗೆ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ. ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯಾದಾಗ ಅದಕ್ಕೆ ನೇರ ಸಚಿವ ಈಶ್ವರಪ್ಪ ನೇರ ಹೊಣೆ ಎಂದು ಪ್ರತಿಭಟಿಸಿ ಈಶ್ವರಪ್ಪನವರ ರಾಜೀನಾಮೆಗೆ ಕಾರಣವಾದ ಕಾಂಗ್ರೆಸ್ ಈಗ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ನೇರ ಸಾಕ್ಷಾದಾರ ಗಳಿದ್ದರೂ ಪ್ರಿಯಾಂಕ್ ಖರ್ಗೆ ರಾಜೀನಾಮೆಯನ್ನು ಕಾಂಗ್ರೆಸ್ ಸರ್ಕಾರ ಪಡೆದಿಲ್ಲ. ಆದ್ದರಿಂದ ಖರ್ಗೆ ರಾಜೀನಾಮೆ ಕೊಡುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ. ನಾಳೆ ಸಚಿವ ಖರ್ಗೆಯವರ ಗುಲ್ಬರ್ಗದ ಮನೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಬಿಜೆಪಿ ಸಜ್ಜಾಗಿದೆ. ಈ ವಿಚಾರದಲ್ಲಿ ಸಚಿವ ಖರ್ಗೆ ನಮ್ಮ ಮನೆಗೆ ಮುತ್ತಿಗೆ ಹಾಕಲು ಬರುವ ಬಿಜೆಪಿ ಯವರಿಗೆ ಕಾಫೀ, ಬಿಸ್ಕೆಟ್ ಕೊಟ್ಟು ಉಪಾಚರಿಸುತ್ತೇವೆ ಎನ್ನುವ ದುರಹಂಕಾರಿ ಮಾತುಗಳನ್ನು ಖರ್ಗೆ ಆಡಿದ್ದಾರೆ. ನಾವು ನಿಮ್ಮ ಮನೆಗೆ ಬಂದು ಕಾಫೀ ಬಿಸ್ಕೆಟ್ ತಿನ್ನಲು ನಿಮ್ಮ ಸಂಬಂಧ ಬೆಳೆಸಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇವೆ ಎಂದ ವೆಂಕಟೇಶ್ ಪ್ರಿಯಾಂಕ್ ಖರ್ಗೆ ಯವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ರಾಷ್ಟ್ರಿಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರ ಭಯ ಇದೆ. ಇದೆ ಕಾರಣದಿಂದ ಸಿದ್ದರಾಮಯ್ಯ ಪ್ರಿಯಾಂಕ್ ಖರ್ಗೆ ಯವರ ರಾಜೀನಾಮೆ ಕೇಳುತ್ತಿಲ್ಲ. ಆದರೆ ತಪ್ಪು ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸದಾ ಒಂದಿಲ್ಲೊಂದು ಹಗರಣಗಳು ಬಯಲಾಗುತ್ತಲೇ ಇವೆ. ವಾಲ್ಮೀಕಿ ಹಗರಣ, ಮೂಡ ಹಗರಣ, ವಖ್ಫ್ ಹಗರಣ ಬಾಣಂತಿಯರ ಸಾವು ಪ್ರಕರಣ ಸೇರಿದಂತೆ ಹಲವಾರು ಸರಣಿ ಹಗರಣಗಳು ನಡೆದಿವೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಅದೆಷ್ಟೋ ಗುತ್ತಿಗೆ ದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗುತ್ತಿಗೆ ದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹಾಗೂ ಅವರ ಆಪ್ತ ರಾಜು ಕಪನೂರರ ಹೆಸರು ಉಲ್ಲೇಖವಾಗಿದ್ದರೂ ಸಹ ಸಚಿವ ಪ್ರಿಯಾಂಕ್ ಖರ್ಗೆ ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ರಾಜೀನಾಮೆ ನೀಡಬೇಕೆಂಬ ಬಿಜೆಪಿ ಒತ್ತಾಯಕ್ಕೆ ಬಿಜೆಪಿಯವರು ಬಟ್ಟೆ ಹರಿದು ಕೊಂಡರೂ ನಾನು ರಾಜೀನಾಮೆ ಕೊಡುವುದಿಲ್ಲ ಎಂಬ ಭಂಡ ತನದ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹಗರಣಗಳ ಜೊತೆಗೆ ಕೊಲೆಗಡುಕ ಸರ್ಕಾರವಾಗಿದ್ದು ಮಂತ್ರಿಗಳ ಭ್ರಷ್ಟಾಚಾರಕ್ಕೆ ಬಲಿಯಾಗಿ ರಾಜ್ಯದ ಇನ್ನೆಷ್ಟು ಜನ ಆತ್ಮಹತ್ಯೆಗೊಳಗಗಬೇಕು. ಇದಕ್ಕೆಲ್ಲ ರಾಜ್ಯ ಬಿಜೆಪಿ ಅವಕಾಶ ಕೊಡದೆ ರಾಜ್ಯದ ಜನರ ರಕ್ಷಣೆಗೆ ನಿರಂತರ ಹೋರಾಟ ಮಾಡುತ್ತದೆ. ಈ ಭ್ರಷ್ಟ ಸರ್ಕಾರ ತೊಲಗುವವರೆಗೂ ಬಿಜೆಪಿ ಸುಮ್ಮನಿರುವುದಿಲ್ಲ. ಅದರಲ್ಲೂ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಬಿಜೆಪಿ ಪ್ರದಾನ ಕಾರ್ಯದರ್ಶಿ, ನಗರಸಭಾ ಸದಸ್ಯ ಬಂತಿ ವೆಂಕಟೇಶ್, ರವಿಕುಮಾರ್ ಸೇರಿದಂತೆ ಪಕ್ಷದ ಹಲವು ಮುಖಂಡರು ಭಾಗವಹಿಸಿದ್ದರು.