*ರೈತರು ಸಾವಯವ ಕೃಷಿಗೆ ಒತ್ತು ನೀಡಿ ಆರ್ಥಿಕವಾಗಿ ಸದೃಢರಾಗಿ– ಶಾಸಕರಾದ ಸಿ. ಪುಟ್ಟರಂಗಶೆಟ್ಟಿ*
ಚಾಮರಾಜನಗರ, ಡಿಸೆಂಬರ್ 23 ರೈತರು ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಲಾಭ ತರುವ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಹಾಗೂ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ರೈತ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬ-2024’ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ರೈತನಾಯಕರಾದ ಪ್ರೊ. ನಂಜುಂಡಸ್ವಾಮಿ ಹಾಗೂ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ರೈತರಿಗೆ ಸಮಸ್ಯೆಗಳು ನಿರಂತರವಾಗಿದೆ. ಇದನ್ನು ಮನಗಂಡಿರುವ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರೈತರು ಬೆಳೆದ ಆಹಾರ ಪದಾರ್ಥಗಳಿಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಸರ್ಕಾರ ರೈತರ ಪರವಾಗಿದ್ದು, ಈ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲಿದೆ. ರೈತರು ಆಧುನಿಕ ಕೃಷಿ ಪದ್ದತಿಗೆ ಹೊಂದಿಕೊಳ್ಳಬೇಕು ಎಂದರು.
ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಲಾಭ ತರುವ ಬೆಳೆ ಬೆಳೆಯಲು ಮುಂದಾಗಬೇಕು. ರೈತರು ಸಾವಯವ ಕೃಷಿಗೆ ಆದ್ಯತೆ ನೀಡಿ ಸಿರಿಧಾನ್ಯಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ಜೊತೆಗೆ ವಿವಿಧ ಬಗೆಯ ಸೊಪ್ಪು ಬೆಳೆಯಬೇಕು. ಸಿರಿಧಾನ್ಯಗಳು ಹಾಗೂ ಸೊಪ್ಪು ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯದೇ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸ್ವಾಮಿನಾಥನ್ ಸಮಿತಿ ವರದಿ ಜಾರಿಯಾಗಿದ್ದರೆ ರೈತರಿಗೆ ಸಾಕಷ್ಟು ಅನುಕೂಲವಾಗುವುದಿತ್ತು. ರೋಗನಿರೋಧಕ ಶಕ್ತಿ ವೃದ್ಧಿಸುವ ಸಿರಿಧಾನ್ಯಗಳ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ. ಸಿರಿಧಾನ್ಯಗಳು ಇಂದು ನ್ಯೂಟ್ರಿಷೀಯನ್, ಡಯಟ್ ಆಹಾರವಾಗಿ ಪರಿವರ್ತನೆ ಹೊಂದಿ ಮಾರುಕಟ್ಟೆಗೆ ಪ್ರವೇಶಿಸಿವೆ ಎಂದರು.
ಕಾವೇರಿ ಅಚ್ಚುಕಟ್ಟು ಪ್ರಾದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ದೇಶದ ಪ್ರತಿಯೊಬ್ಬರಿಗೂ ಅನ್ನ ನೀಡುವ ರೈತರನ್ನು ನೆನೆಯಬೇಕು. ಅತಿವೃಷ್ಠಿ, ಅನಾವೃಷ್ಠಿ ಸಂದರ್ಭಗಳಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರುಪೇರಾಗಲಿದೆ. ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ ಘೋಷಿಸಿ ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು. ರೈತ ಹಾಗೂ ರೈತ ಮಹಿಳೆಯರಿಗೆ ನೀಡುವ ಆಧುನಿಕ ಕೃಷಿ ಯಂತ್ರೋಪಕರಣ, ಹನಿ ನೀರಾವರಿ ಸಬ್ಸಿಡಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಹಾಗೂ ಭಾಗ್ಯರಾಜ್ ಅವರು ಮಾತನಾಡಿ ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ನಿಗದಿತ, ನಿಖರ ಬೆಲೆ ದೊರೆಯಬೇಕು. ಕೃಷಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಮುಂದಾಗಬೇಕು. ನಾವು ನಮಗೋಸ್ಕರ ಆಹಾರ ಪದಾರ್ಥಗಳನ್ನು ಬೆಳೆಯಬೇಕಾಗಿದೆ. ರೈತರು ನೈಸರ್ಗಿಕ ಕೃಷಿಗೆ ಹೊಂದಿಕೊಳ್ಳಬೇಕಾಗಿದೆ. ಇದರಿಂದ ಭೂಮಿ, ಪರಿಸರ ಉಳಿಯಲಿವೆ. ಪ್ರತಿಯೊಬ್ಬರು ಸಾವಯವ ಕೃಷಿಗೆ ಒಲವು ತೋರಬೇಕು. ಉತ್ಪಾದಕರು, ಗ್ರಾಹಕರು ನಾವೇ ಆಗಬೇಕು. ಆಗಮಾತ್ರ ರೈತರಿಗೆ ಉಳಿಗಾಲವಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕೃಷಿ ಜಂಟಿ ನಿರ್ದೇಶಕರಾದ ಅಬೀದ್ ಅವರು ಇಂದು ಮಾಜಿ ಪ್ರಧಾನಿ ಚರಣ್‍ಸಿಂಗ್ ಜನ್ಮದಿನವಾಗಿದ್ದು, ಚರಣ್‍ಸಿಂಗ್ ಅವರು ಕೃಷಿ ಸಚಿವರು ಹಾಗೂ ಪ್ರಧಾನಿಯಾಗಿದ್ದ ಅವಧಿಯಲ್ಲಿ ರೈತರ ಶ್ರೇಯೋಭಿವೃದ್ಧಿಗೆ ಹತ್ತು-ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು. ಉತ್ತರಭಾರತದಲ್ಲಿ ರೈತರ ದಿನಾಚರಣೆಯನ್ನು ಚರಣ್‍ಸಿಂಗ್ ಹೆಸರಿನಲ್ಲಿ ಹಬ್ಬದ ಮಾದರಿಯಲ್ಲಿ ಆಚರಿಸುತ್ತಾರೆ. ಇಲ್ಲಿಯೂ ಅದನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಪಾಕ ಹಾಗೂ ಮರೆತುಹೋದ ಆಹಾರ, ತಿನಿಸುಗಳ ತಯಾರಿಕೆ ಸ್ಫರ್ಧೆಯಲ್ಲಿ ವಿಜೇತರಾದ ಮಹಿಳೆಯರನ್ನು ಮತ್ತು ಆತ್ಮ ಯೋಜನೆಯಡಿ ಜಿಲ್ಲಾಮಟ್ಟದ ಶ್ರೇಷ್ಠ ರೈತ ಪ್ರಶಸ್ತಿ ವಿಜೇತರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ಆರಂಭದಲ್ಲಿ ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳಿಂದ ಅಲಂಕೃತಗೊಳಿಸಿದ್ದ ರಾಶಿ ಪೂಜೆ ನೆರವೇರಿಸಲಾಯಿತು.
ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಕೃಷಿ ಇಲಾಖೆ ಉಪನಿರ್ದೇಶಕರಾದ ಸುಷ್ಮಾ , ರೈತ ಮುಖಂಡರಾದ ಎಂ. ಸಂಪತ್, ಎಸ್. ಮಹದೇವಪ್ಪ, ಎಚ್.ಕೆ. ಮಂಜೇಶ್, ಮಹೇಶ್ ಮೂಡ್ನಾಕೂಡು, ಆಲೂರು ಸಂತೋಷ್, ಚಿನ್ನಸ್ವಾಮಿ ಕಾಡಹಳ್ಳಿ, ಮಹದೇವಮೂರ್ತಿ, ಹೊನ್ನೂರು ಬಸವಣ್ಣ, ಹೆಬ್ಬಸೂರು ಬಸವಣ್ಣ, ಶಿವಮೂರ್ತಿ ನಾಯಕ, ನಾಗರಾಜು, ಸೋಮಣ್ಣ, ಕರಿಯಪ್ಪ, ಚಿಕ್ಕರಾಜು, ರಾಜು, ಶಿವಕುಮಾರ್, ಕೆವಿಕೆ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬದ ಅಂಗವಾಗಿ ಜಿಲ್ಲಾಡಳಿತದ ಮುಂಭಾಗದಿಂದ ಭುವನೇಶ್ವರಿ ವೃತ್ತದ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಏರ್ಪಡಿಸಲಾಗಿದ್ದ ಸಿರಿಧಾನ್ಯ ನಡಿಗೆಗೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.