ಮಾದಾಪುರ ಗ್ರಾಮದಲ್ಲಿ ಅಕ್ರಮವಾಗಿ ಪೆಟ್ರೋಲ್ ಬಂಕ್ ನಿರ್ಮಾಣ: ಸ್ಥಗಿತಗೊಳಿಸಲು ಮನವಿ
ಚಾಮರಾಜನಗರ : ಚಾಮರಾಜನಗರದಿಂದ ಸಂತೇಮರಹಳ್ಳಿ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 948ರ ಮಾದಾಪುರದ ಸಂತ ತೆರೇಸಾ ಶಾಲೆಯ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಪೆಟ್ರೋಲ್ ಬಂಕ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಮುಖಂಡ ಹೊಂಗನೂರು ನಟರಾಜು ಅವರು ತಿಳಿಸಿದರು.
ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದ ಸಂತ ತೆರೇಸಾ ಶಾಲೆಯ ಪಕ್ಕದಲ್ಲಿರುವ ಜಮೀನಿನ ಸರ್ವೆ ನಂ. 157/4 ರಲ್ಲಿ 0.03.12 ಗುಂಟೆ ಜಮೀನಿನಲ್ಲಿ ಮುರುಗೇಶನ್.ಆರ್ ಬಿನ್ ರಾಜು.ಎಂ ಬಿಸಲವಾಡಿ ಗ್ರಾಮ ಚಾಮರಾಜನಗರ ಅವರು ಅಕ್ರಮವಾಗಿ ಪೆಟ್ರೋಲ್ ಬಂಕ್ ನಿರ್ಮಾಣ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಇದು ಮಾದಾಪುರ ಗ್ರಾಮದ ಹಳ್ಳದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 948 ಕ್ಕೆ ಹೊಂದಿಕೊಂಡಿರುತ್ತದೆ. ಸದರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪರವಾನಗಿ ( ಲೈಸೆನ್ಸ್) ಪಡೆದುಕೊಂಡಿದ್ದೇನೆ ಎಂದು ಹೇಳಿ ಇನ್ನು ಉಳಿದ ಇಲಾಖಾವಾರು ಪರವಾನಿಗೆ ಪಡೆದಿರುವುದಿಲ್ಲ.ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದಿಂದ ಪರವಾನಗಿ ಪಡೆದಿರುವುದಿಲ್ಲ ಹಾಗೂ ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಚೂಡ) ಪರವಾನಗಿಯೂ ಪಡೆದಿರುವುದಿಲ್ಲ ಆದ್ದರಿಂದ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಪಡೆಯದೆ ಪೆಟ್ರೋಲ್ ಬಂಕ್ ನಿರ್ಮಾಣ ಮಾಡುತ್ತಿರುವುದು ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ, ಹಾಗೆಯೇ ಪಕ್ಕದಲ್ಲೇ ಶಾಲೆ ಇರುವುದರಿಂದ ವಾಯುಮಾಲಿನ್ಯ ಹೆಚ್ಚಾಗುವುದಲ್ಲದೆ ರಸ್ತೆ ಅಪಘಾತಗಳು ಹೆಚ್ಚಾಗುತ್ತವೆ. ಕೆಲವು ದಿನಗಳ ಹಿಂದೆ ಸಂತ ತೆರೇಶ ಶಾಲೆಯ ಬಾಲಕಿಯು ಕೆ.ಎಸ್.ಆರ್.ಸಿ ಬಸ್ ನಿಂದ ಅಪಘಾತವಾಗಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯ ಮೃತಪಟ್ಟಿರುತ್ತಾಳೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ನಾವುಗಳು ಜಿಲ್ಲಾಧಿಕಾರಿ ಅವರಿಗೆ ಸದರಿ ಪೆಟ್ರೋಲ್ ಬಂಕ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಬೇರೆಡೆಗೆ ಸ್ಥಳಾಂತರಿಸಲು ಅ.23 ರಂದು ದೂರು ಸಲ್ಲಿಸಲಾಗಿರುತ್ತದೆ ಹಾಗೂ ಸಂಬಂದಪಟ್ಟ ಇಲಾಖೆಗಳಿಗೂ ದೂರು ನೀಡಿರುತ್ತೇವೆ ಈ ಬಗ್ಗೆ ಸುಮಾರು 20 ರಿಂದ 25 ದಿನಗಳು ಕಳೆದರೂ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿರುವುದಿಲ್ಲ ಮತ್ತು ಶಿಕ್ಷಣ ಇಲಾಖೆ ಉಪ ನಿರ್ದೇಶಕರಾಗಲೀ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲೀ ಇತ್ತ ಗಮನ ಹರಿಸಿರುವುದಿಲ್ಲ ಆದ್ದರಿಂದ ಮಕ್ಕಳ ಹಿತದೃಷ್ಟಿಯಿಂದ ಹಾಗೂ ಅವರ ಭವಿಷ್ಯಕ್ಕಾಗಿ ಪೆಟ್ರೋಲ್ ಬಂಕ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಬೇರೆಡೆಗೆ ಸ್ಥಳಾಂತರಿಸಲು ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡ ನಾಗೇಶ್ ಬೋಗಾಪುರ ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ