ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸುವುದೇ ಸರ್ಕಾರದ ಪ್ರಮುಖ ಉದ್ದೇಶವಾಗಿದೆ–ಸಿ.ಎಂ ಸಿದ್ದರಾಮಯ್ಯ
ಚಾಮರಾಜನಗರ:ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸುವುದೇ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.
ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಯಳಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಪ್ರತಿ ತಾಲೂಕಿನಲ್ಲಿಯೂ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಬೇಕು. ಡಯಾಲಿಸಿಸ್ ಘಟಕಗಳು ಇರಬೇಕು. ಪ್ರತಿ ಜಿಲ್ಲೆಯಲ್ಲಿಯೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಇಂದು ಶಂಕುಸ್ಥಾಪನೆ ನೆರವೇರಿಸಿರುವ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕಾಗಿ 35 ಕೋಟಿ ರೂ. ಗಳನ್ನು ನೀಡಲಾಗಿದೆ. ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣವಾಗಬೇಕು. ಗುಣಮಟ್ಟದ ಕಾಮಗಾರಿ ನಡೆಯಬೇಕು ಎಂದು ಅಧಿಕಾರಿಗಳು ಗುತ್ತಿಗೆದಾರರಿಗೆ ಮುಖ್ಯಮಂತ್ರಿಯವರು ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸ್ನೇಹದಿಂದ ರೋಗಿಗಳನ್ನು ಕಾಣಬೇಕು. ಬಂದವರೊಂದಿಗೆ ಚೆನ್ನಾಗಿ ಮಾತನಾಡಿದರೆ ರೋಗಿಗಳ ಅರ್ಧರೋಗ ವಾಸಿಯಾಗಲಿದೆ. ವೈದ್ಯರು ಗ್ರಾಮೀಣ ಭಾಗದವರು, ಬಡಜನರೊಂದಿಗೆ ಅಪ್ತವಾಗಿ ಮಾತನಾಡಿ ಚಿಕಿತ್ಸಾ ಸೇವೆಗಳನ್ನು ನೀಡಿದರೆ ಆಸ್ಪತ್ರೆಗಳ ನಿರ್ಮಾಣಕ್ಕೂ ಸಾರ್ಥಕತೆ ಸಿಗಲಿದೆ ಎಂದರು.
ಪ್ರತಿಯೊಬ್ಬರು ಶಿಸ್ತಿನ ಜೀವನ ನಡೆಸಬೇಕು. ಕೆಟ್ಟ ಅಭ್ಯಾಸಗಳನ್ನು ಬಿಡಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವ್ಯಾಯಾಮ, ಇತರೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಆರೋಗ್ಯಕರ ಬದುಕಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ಮಾಡಿದರು.
ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಮಾತನಾಡಿ ರಾಜ್ಯಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಚಾಮರಾಜನಗರ ಜಿಲ್ಲೆಯಲ್ಲಿ 2.5 ಲಕ್ಷ ಕುಟುಂಬಗಳಿಗೆ ತಲುಪುತ್ತಿವೆ. ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ರೂ. ಯೋಜನೆಗಳಿಂದ ಸಿಗುತ್ತಿದೆ. ಬಡ ಕುಟುಂಬಗಳಿಗೆ ಕನಿಷ್ಠ ಆದಾಯ ಬರುವಂತಾಗಿದೆ. ನಾವು ಜನರಿಗೆ ಏನು ಹೇಳಿದ್ದೇವೆಯೋ ಅದನ್ನೇ ಮಾಡಿದ್ದೇವೆ, ಮಾಡಿರುವ ಕೆಲಸವನ್ನು ಜನರಿಗೆ ಹೇಳಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ, ನಿರ್ಧಾರಗಳು ಜನಪರವಾಗಿವೆ. ಸರ್ವರ ಅಭಿವೃದ್ಧಿಗೆ ಪೂರಕವಾಗಿರುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದ ಬಡವರ ಪರ ಧ್ವನಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸಾಮಾನ್ಯ ಜನರ ಹಿತ ಕಾಯುವ ವಿಷಯ ಆದ್ಯತೆಯಾಗಿದೆ ಎಂದು ಎಚ್.ಸಿ. ಮಹದೇವಪ್ಪ ಅವರು ತಿಳಿಸಿದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ಈ ಭಾಗದ ಜನರ ಆರೋಗ್ಯ ಭಾಗ್ಯಕ್ಕಾಗಿ ಮುಖ್ಯಮಂತ್ರಿಯವರು ಆಯವ್ಯಯದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ರಾಜ್ಯಸರ್ಕಾರ ನುಡಿದಂತೆ ನಡೆದಿದೆ. ಕಾಡಂಚಿನ ಜನರಿಗೆ ನಮ್ಮ ತಂದೆಯವರಾದ ಬಿ.ರಾಚಯ್ಯ ಅವರು ಸಚಿವರಾಗಿದ್ದ ಅವಧಿಯಲ್ಲಿ ಸಾಗುವಳಿಗೆ ಭೂಮಿ ಕೊಟ್ಟಿದ್ದರು. ಇವರಿಗೆ ಕಾನೂನುಬದ್ಧವಾಗಿ ಸರ್ಕಾರದಿಂದ ನೆರವು ಬೇಕಿದೆ. ತಾಲೂಕಿನ 33 ಕೆರೆಗಳನ್ನು ಅಭಿವೃದ್ದಿಗೊಳಿಸಿ ರೈತರಿಗೆ, ಜನರಿಗೆ ಪ್ರಯೋಜನ ದೊರಕಿಸಿಕೊಡಬೇಕಿದೆ ಎಂದರು.
ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಎಂಎಸ್‍ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಂ.ಆರ್. ಮಂಜುನಾಥ್ ಎಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷರಾದ ಮರಿಸ್ವಾಮಿ, ಚೂಡ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿ ಮಲ್ಲು, ಉಪಾಧ್ಯಕ್ಷರಾದ ಶಾಂತಮ್ಮ ನಿಂಗರಾಜು, ಸದಸ್ಯರಾದ ಮಹೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ