ಬಹು ವರ್ಷಗಳ ನಿರೀಕ್ಷೆಯ ಫಲ 31 ಹಾಡಿಗಳಿಗೆ ಬೆಳಕು
ಚಾಮರಾಜನಗರ:ಬಹುವರ್ಷಗಳ ಬೇಡಿಕೆ ಈಡೇರಿಕೆಯಾಗಿದೆ, ಜಿಲ್ಲೆಯ 31 ಹಾಡಿಗಳಿಗೆ ವಿದ್ಯುತ್ ಒದಗಿಸುವ ಮಹತ್ತರ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರಿಂದ ಚಾಲನೆ
ಕತ್ತಲು ತುಂಬಿದ್ದ ಜಿಲ್ಲೆಯ 31 ಹಾಡಿಗಳಿಗೆ ಬೆಳಕು ಚೆಲ್ಲುವ ಬಹು ವರ್ಷಗಳ ಬೇಡಿಕೆ ನಿರೀಕ್ಷೆಗೆ ಫಲ ಸಿಕ್ಕಿದೆ.
ಚಾಮರಾಜನಗರ ಜಿಲ್ಲೆಯ 31 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ತರ ಯೋಜನೆಗೆ ಇಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಯಳಂದೂರು ತಾಲೂಕಿನ ಪುರಾಣಿ ಪೋಡಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ಜಿಲ್ಲೆಯ ಕ್ಯಾತದೇವರಗುಡಿ, ಕನ್ನೇರಕಾಲೋನಿ, ಬೂತಾನಿಪೋಡು, ಮೊಣಕೈ ಪೋಡು, ಬೇಡಗುಳಿ, ಮಾರಿಗುಡಿ ಪೋಡು, ಕಾಡಿಗೆರೆ, ಬಂಡಿಗೆರೆ, ಬಿಸಲಗೆರೆ, ಇಂಡಿಗನತ್ತ, ಮೆಂದಾರೆ, ತುಳಸಿಕೆರೆ, ನೆಲ್ಲಿಕತ್ರಿ, ಕೆರೆದಿಂಬ, ಗೊಂಬೆಗಲ್ಲು, ಅತ್ತಿಖಾನೆ-ಕಡಲಕೊಂಡಿ, ಹೊನ್ನಮೇಟಿ, ಬೆಳ್ಳಾಚಿ, ಕೊಕ್ಕಬಾರೆ, ತೊಕ್ಕೆರೆ, ದೊಡ್ಡಾಣೆ, ಆಲಂಬಾಡಿ, ಆಪಮಕಟ್ಟಿ, ಜಂಬುಪಟ್ಟಿ, ಮಾರಿಕೋಟೆ-ಹೊಗೇನೆಕಲ್, ತೆಕ್ಕಾಣೆ, ಪಡಸಲನತ್ತ, ಮೆದಗಾಣೆ, ಪಾಲಾರ್, ಪುರಾಣಿಪೋಡು, ಕಲ್ಯಾಣಿಪೋಡು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಮಾತನಾಡಿ ಇಂದು ಸಂತೋಷದ ದಿನ. ಕತ್ತಲಲ್ಲಿದ್ದ ಹಾಡಿಗಳಿಗೆ ಬೆಳಕು ನೀಡುವ ಮಹತ್ವದ ಯೋಜನೆಗೆ ಚಾಲನೆ ನೀಡಿದ ಸಾರ್ಥಕ ಕೆಲಸ ಮಾಡಿದ ತೃಪ್ತಿಯಿದೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳು, ಸಚಿವರು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ವಿಶೇಷವಾಗಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿಯಿಂದ ವಿದ್ಯುತ್ ನೀಡುವ ಕೆಲಸಕ್ಕೆ ಸಾಕಾರ ದೊರೆತಿದೆ ಎಂದರು.
ಒಟ್ಟು 41.6 ಕೋಟಿ ರೂ. ವೆಚ್ಚದಲ್ಲಿ 31 ಹಾಡಿಗಳ 2486 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಾರ್ಥಕ ಯೋಜನೆಗೆ ಇಂದು ಚಾಲನೆ ನೀಡಿದ್ದೇವೆ. ಹಾಡಿ ಬುಡಕಟ್ಟುಗಳ ಜನತೆಗೆ ಮೂಲ ಸೌಕರ್ಯ ಒದಗಿಸುವ ಕಾರ್ಯಗಳಿಗೆ ಮುಖ್ಯಮಂತ್ರಿಯವರು ಮುಂದಾಗಿದ್ದಾರೆ. ಹಾಡಿ ವ್ಯಾಪ್ತಿಯಲ್ಲಿ 128 ಕಿ.ಮೀನಷ್ಟು ರಸ್ತೆಗಳನ್ನು ಅಭಿವೃದ್ದಿಪಡಿಸಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಈಗಿರುವ ರಸ್ತೆಯನ್ನೇ ಅಭಿವೃದ್ದಿಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಹಾಡಿ ಬುಡಕಟ್ಟುಗಳ ಜನರಿಗೆ ಮನೆ ಒದಗಿಸುವ ಬೇಡಿಕೆಯನ್ನು ಇಟ್ಟಿದ್ದೇವೆ. ಈ ಸಂಬಂಧ 5 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಮನವಿಯನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದು, ಈ ಕುರಿತು ಪ್ರಸ್ತಾವನೆ ಕಳುಹಿಸಿಕೊಡಲು ಸೂಚಿಸಿದ್ದಾರೆ. ನಮ್ಮ ಸರ್ಕಾರ ಹಾಡಿ ಪೋಡುಗಳ ಜನತೆಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡಲು ಬದ್ದವಾಗಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗೆ ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಹಾಡಿಗಳಿಗೆ ವಿದ್ಯುತ್ ಒದಗಿಸುವ ಯೋಜನೆಗೆ ಚಾಲನೆ ಸಿಕ್ಕಿರುವ ಇಂದು ಸುದಿನ ಎಂದೇ ಭಾವಿಸುವೆ. ಬಹುದಿನಗಳ ಬೇಡಿಕೆ ಈಡೇರುತ್ತಿದೆ. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಯೋಜನೆ ಅನುಷ್ಠಾನವಾಗಲು ವಿಶೇಷವಾಗಿ ಶ್ರಮಿಸಿದ್ದಾರೆ. ಅಂಡರ್ ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಒದಗಿಸಲಾಗುತ್ತದೆ ಎಂದರು.
ರಸ್ತೆ, ಚರಂಡಿ, ಮನೆಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಕಬಿನಿ ಪೈಲೆಟ್ ಪ್ರಾಜೆಕ್ಟ್ ಗಾಗಿ ಹನೂರು ಮತ್ತು ಕೊಳ್ಳೇಗಾಲಕ್ಕೆ ತಲಾ 50 ಲಕ್ಷ ರೂ. ಗಳನ್ನು ಉಪ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಬಿಳಿಗಿರಿರಂಗನಬೆಟ್ಟದ ತೇರು ಬೀದಿ, ಮೆಟ್ಟಿಲುಗಳ ನಿರ್ಮಾಣ ಕಾರ್ಯವೂ ಸಹ ನಡೆಯುತ್ತಿದೆ. ಅನೇಕ ಜನಪರ ಯೋಜನೆಗಳು ಅನುಷ್ಠಾನ ಮಾಡುತ್ತಿದ್ದೇವೆ ಎಂದು ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಇಂಧನ ಸಚಿವರು, ಎಲ್ಲಾ ಶಾಸಕರು, ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳ ಸತತ ಪ್ರಯತ್ನದಿಂದ ಇಂದು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಯೋಜನೆಗೆ ಸಂಬಂಧಿಸಿದಂತೆ ತೊಡಕಾಗಿದ್ದ ಅರಣ್ಯ ಸಮಸ್ಯೆಗಳನ್ನು ಬಗೆಹರಿಸಿ ಇಂದು ಯೋಜನೆಗೆ ಚಾಲನೆ ಸಿಕ್ಕಿದೆ. ಹಾಡಿಯಲ್ಲಿನ ರಸ್ತೆ ಅಭಿವೃದ್ದಿಗಾಗಿ ಯೋಜನೆ ತಯಾರಿಸಿದ್ದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ರಮವಹಿಸಲಿದೆ ಎಂದರು.
ಅರಣ್ಯ ಪ್ರದೇಶದಲ್ಲಿ ಬಿಎಸ್ಎನ್ಎಲ್ ಟವರ್ ಸ್ಥಾಪಿಸುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ. ಮನೆಗಳ ನಿರ್ಮಾಣಕ್ಕೂ ಸೂಕ್ತ ಕಾರ್ಯ ಯೋಜನೆ ರೂಪಿಸಿದ್ದೇವೆ. ಎಲ್ಲರ ಸಹಕಾರದೊಂದಿಗೆ ಅರಣ್ಯ, ಹಾಡಿ ವಾಸಿಗಳ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಕೆಲಸಕ್ಕೆ ಬದ್ದವಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಶಾಸಕರಾದ ಹೆಚ್.ಎಂ. ಗಣೇಶ ಪ್ರಸಾದ್, ಎಂ.ಆರ್. ಮಂಜುನಾಥ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವು, ಉಪಾಧ್ಯಕ್ಷರಾದ ಕಮಲಮ್ಮ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಹಿರಿಯ ಅಧಿಕಾರಿಗಳಾದ ದಿವಾಕರ್, ಸೋಮಶೇಖರ್, ತಹಶೀಲ್ದಾರ್ ಜಯಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಮುಖಂಡರಾದ ಕೇತಮ್ಮ, ಡಾ. ಮಾದೇಗೌಡ, ದಾಸೇಗೌಡ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಆರ್ ಉಮೇಶ್ ಮೈಲಾರಪಾಳ್ಯ