ಪಾಲಾರ್ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದ 2.71 ಲಕ್ಷಕ್ಕೂ ಹೆಚ್ಚು ಹಣ ವಶ
ಚಾಮರಾಜನಗರ:ಮಾರ್ಚ್ 23 :- ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲಾರ್ ಚೆಕ್ಪೋಸ್ಟ್ ಬಳಿ ಶುಕ್ರವಾರ ರಾತ್ರಿ 8 ಗಂಟೆ ಸಮಯದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2,71,670 ರೂ. ಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಳೆದ (ಮಾರ್ಚ್ 22) ರಾತ್ರಿ 8 ಗಂಟೆ ವೇಳೆ ಪಾಲಾರ್ ಚೆಕ್ಪೋಸ್ಟ್ ಬಳಿ ಬೊಲೆರೋ ವಾಹನದಲ್ಲಿ ಶಿವಮೂರ್ತಿ ಎಂಬುವವರಿಂದ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 2,71,670 ರೂ. ಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿ ಶಾಂತರಾಜು, ಸಬ್ಇನ್ಸ್ಪೆಕ್ಟರ್ ಜಯರಾಮ್ ಮತ್ತು ತಂಡದವರು ಜಪ್ತಿ ಮಾಡಿದ್ದಾರೆ.
ಹಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸ್ಪಷ್ಟ, ಸಮಂಜಸ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಹಣ ವಶಕ್ಕೆ ಪಡೆದು ಕೊಳ್ಳೇಗಾಲದ ಉಪ ಖಜಾನೆಯಲ್ಲಿ ಇರಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.