ಮಾ. 25ರಿಂದ ಜಿಲ್ಲೆಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ : ಪರೀಕ್ಷಾ ಕಾರ್ಯಗಳ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ
ಚಾಮರಾಜನಗರ:ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಸಂಬಂಧ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ
ಜಿಲ್ಲಾಧಿಕಾರಿಗಳು ಮಾತನಾಡಿದರು.
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯು ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ನಡೆಯಲಿದ್ದು, ಪರೀಕ್ಷಾ ಪ್ರಾರಂಭದಿಂದ ಅಂತ್ಯದವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಮುಖ್ಯ ಅಧೀಕ್ಷಕರು ಹಾಗೂ ಮಾರ್ಗಾಧಿಕಾರಿಗಳು ವಹಿಸಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪರೀಕ್ಷಾ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ಗೊಂದಲಗಳಿಗೆ ಅಸ್ಪದವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉತ್ತಮ ಗಾಳಿ-ಬೆಳಕಿನ ವ್ಯವಸ್ಥೆ ಇರಬೇಕು. ಕುಡಿಯುವ ನೀರು, ಶೌಚಾಲಯ, ಸ್ವಚ್ಚತಾ ಕಾರ್ಯಗಳು ವ್ಯವಸ್ಥಿತವಾಗಿರಬೇಕು. ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಅವಶ್ಯ ಸೌಲಭ್ಯಗಳನ್ನು ನೀಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು. ಈಗಾಗಲೇ ಅಳವಡಿಸಿರುವ ಸಿ.ಸಿ ಕ್ಯಾಮೆರಾಗಳು ಚಾಲ್ತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಪರೀಕ್ಷೆ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ವ್ಯವಸ್ಥೆ ಇರಬೇಕು. ಪರೀಕ್ಷಾ ಕೇಂದ್ರಗಳಲ್ಲಿನ ಯು.ಪಿ.ಎಸ್‍ಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಯಾವುದೇ ಬಗೆಯ ಪರೀಕ್ಷಾ ಅಕ್ರಮಗಳನ್ನು ತಡೆಯಲು ರಚಿಸಲಾಗಿರುವ ಸ್ಥಾನಿಕ ಜಾಗೃತ ದಳ ಪಾರದರ್ಶಕವಾಗಿ ಕಾರ್ಯಾಚರಣೆ ನಡೆಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಹೆಲ್ಪ್‍ಡೆಸ್ಕ್ ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕಾಗಿ ಸಾಮಾನ್ಯ ಬಸ್ಸುಗಳೊಂದಿಗೆ 33 ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಬಸ್‍ಗಳು ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲು ನೆರವಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ಅವರು ಮಾತನಾಡಿ ಚಾಮರಾಜನಗರ ತಾಲೂಕಿನ 4019 ವಿದ್ಯಾರ್ಥಿಗಳು, ಗುಂಡ್ಲುಪೇಟೆಯ 2722, ಹನೂರಿನ 2507, ಕೊಳ್ಳೇಗಾಲದ 2180 ಹಾಗೂ ಯಳಂದೂರಿನ 975 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 12403 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಚಾಮರಾಜನಗರ ತಾಲೂಕಿನ 15, ಗುಂಡ್ಲುಪೇಟೆ 9, ಹನೂರು 9, ಕೊಳ್ಳೇಗಾಲ 8 ಹಾಗೂ ಯಳಂದೂರು ತಾಲೂಕಿನ 4 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 45 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಧೀಕ್ಷಕರು, ಮಾರ್ಗಾಧಿಕಾರಿಗಳಾಗಿ ನೇಮಕವಾಗಿರುವ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ