ಕನ್ನಡ ಬಳಕೆ ಜಿಲ್ಲಾಧಿಕಾರಿ ಆದೇಶ ಸ್ವಾಗಾತಾರ್ಹ–ಪುರುಷೋತ್ತಮ ಗೌಡ

ಬೆಂಗಳೂರು ಗ್ರಾಮಾಂತರ ಜಿಲ್ಲೆ :ಮಾರ್ಚ್ 12 : “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022” ನ್ನು ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಹಾಗೂ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ(ತಿದ್ದುಪಡಿ) ವಿಧೇಯಕ-2024” ರನ್ವಯ ಕನ್ನಡ ಭಾಷೆಯನ್ನು ಫಲಕಗಳ ಮೇಲ್ಬಾಗದಲ್ಲಿ ಶೇ 60%ರಷ್ಟು ಕಾಣುವಂತೆ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾಧಿಕಾರಿ ಶಿವಶಂಕರ್ ಆದೇಶ ಮಾಡಿದ್ದು.

ತಮ್ಮ ಆದೇಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಾಜ್ಯ ಸರ್ಕಾರದ ಇಲಾಖೆಗಳು, ಸ್ವಾಯುತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಟ್ರಸ್ಟ್ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ ಗಳು ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಸರ್ಕಾರಿ ಆದೇಶದಂತೆ ಕಡ್ಡಾಯವಾಗಿ ಶೇ60%ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ )ಯ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ಸ್ವಾಗತಿಸಿದ್ದಾರೆ.

ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ಆದೇಶದಂತೆ ಜಿಲ್ಲೆಯಾದ್ಯಂತ ಸಂಚರಿಸಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಸುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳನ್ನು ಮಾಡಿದ್ದೇವೆ. ಇದನ್ನು ಮನಗಂಡು ಜಿಲ್ಲಾಧಿಕಾರಿಗಳು ಇಂದು(ಮಾ.12) ಹೊರಡಿಸಿರುವ ಆದೇಶವು ಸ್ವಾಗತರ್ಹ. ಇನ್ನಾದರೂ ವಾಣಿಜ್ಯ ಮಳಿಗೆಯ ಮಾಲೀಕರು ಎಚ್ಚೆದ್ದು ಸರ್ಕಾರದ ಆದೇಶದಂತೆ ತಮ್ಮ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಕನ್ನಡ ಭಾಷೆ ಬಳಸುವ ಮನಸ್ಸು ಮಾಡಲಿ. ಇದು ನಾರಾಯಣಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.