ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಹಳೆಯ ಯೋಜನೆಗಳ ಹೊಸ ಬಜೆಟ್ ಎಂದು ಟೀಕಿಸಿದ ಸದಸ್ಯರು
ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷೆ ಸುಧಾ ಲಕ್ಷ್ಮೀನಾರಾಯಣ ಅವರು ಮಂಡಿಸಿದ 3ನೇ ಹಾಗೂ ತಮ್ಮ ಅವಧಿಯ ಕೊನೆಯ ಆಯವ್ಯಯವಾದ 2024-25ನೇ ಸಾಲಿನ ಮುಂಗಡ ಪತ್ರವು ಲೆಕ್ಕಶೀರ್ಷಿಕೆಯ ದಸ್ತಾವೇಜಾಗಿ ನಿರಾಶೆ ಮೂಡಿಸಿದೆ. ಸಮರ್ಪಕ ಆದಾಯ ಕ್ರೂಢೀಕರಣ, ಜನಪರ ಘೋಷಣೆ, ಕಾರ್ಯಕ್ರಮಗಳಿಲ್ಲದ ಪುನರಾವರ್ತಿತ ಯೋಜನೆಗಳ ಲೆಕ್ಕಪತ್ರವಾಗಿದೆ ಎಂದು ಟೀಕೆಗೆ ಗುರಿಯಾಗಿದೆ.
ಆಡಳಿತರೂಢ ಮೈತ್ರಿ ಪಕ್ಷಗಳಾದ ಜೆಡಿಎಸ್, ಬಿಜೆಪಿಯ ಸದಸ್ಯರು ಮುಂಗಡ ಪತ್ರವನ್ನು ಮೇಜುಕುಟ್ಟಿ ಸ್ವಾಗತಿಸಿದರೆ, ಇನ್ನೂ ಕೆಲ ಸದಸ್ಯರು ಇದೊಂದು ಜಮಾಖರ್ಚುಗಳ ದಾಸ್ತಾವೇಜು, ಖಾಲಿ ಡಬ್ಬ ಎಂದು ಟೀಕಿಸಿದರು.
ಮಹಿಳಾ ಅಧ್ಯಕ್ಷೆಯೊಬ್ಬರು ಮೂರು ಬಾರಿ ಬಜೆಟ್ ಮಂಡಿಸಿದ್ದನ್ನೇ ಸಾಧನೆ ಎಂಬಂತೆ ಕೆಲ ಸದಸ್ಯರು ಶಹಬ್ಬಾಶ್ ಗಿರಿ ಕೊಟ್ಟರು. ಒಟ್ಟಾರೆ ನಗರಸಭೆ ಅಧ್ಯಕ್ಷೆ ಸುಧಾ ಲಕ್ಷ್ಮಿನಾರಾಯಣ್ ಅವರು 2024-25ನೇ ಸಾಲಿನಲ್ಲಿ 1.50 ಕೋಟಿ ಉಳಿತಾಯ ಬಜೆಟ್ ಮಂಡಿಸಿ ಸದಸ್ಯರ ಅನುಮೋದನೆ ಪಡೆದರು.
ಇದಾದ ಬಳಿಕ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಸದಸ್ಯ ಶಿವಶಂಕರ್ ಅವರು, ನಗರಸಭೆ ಮೂಲಗಳಿಂದ ಇನ್ನಷ್ಟು ಹೆಚ್ಚು ಆದಾಯ ನಿರೀಕ್ಷಿಸಬಹುದಿತ್ತು. ಅಮೃತ್ 2.0 ಯೋಜನೆಯಡಿ ಪ್ರಸ್ತಾಪಿಸಿರುವ ಕಾಮಗಾರಿ/ ಕಾರ್ಯಕ್ರಮಗಳನ್ನು ತ್ವರಿತವಾಗಿ ಮುಗಿಸಬೇಕು. ಪ್ರತಿ ಬಾರಿಯ ಬಜೆಟ್ ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಅನುದಾನ ಮೀಸಲಿಡಲಾಗುತ್ತಿದೆ. ಆದರೆ, ಸಿಸಿಟಿವಿ ಮಾತ್ರ ಬಂದಿಲ್ಲ. ಈ ವರ್ಷವಾದರೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಬದ್ಧತೆ ತೋರಿಸಬೇಕು ಎಂದು ಹೇಳಿದರು.
ಫುಡ್ ಕೋರ್ಟ್ ಗೆ ಜಾಗ ಗುರುತಿಸಿದ್ದು, ತ್ವರಿತವಾಗಿ ಆರಂಭಿಸಬೇಕು. ಕೆರೆ, ಉದ್ಯಾನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಜೆ.ಡಿ.ಎಸ್ ಸದಸ್ಯ ಮಲ್ಲೇಶ್ ಮಾತನಾಡಿ, ಕಳೆದ ವರ್ಷ ತೆಗೆದಿರಿಸಿದ್ದ ಸಿಸಿಟಿವಿ ಕ್ಯಾಮೆರಾ ಹಣವನ್ನು ಇನ್ನೂ ಬಳಕೆ ಮಾಡಿಲ್ಲ. ಈಗ ಮತ್ತೆ ಅದೇ ಘೋ ಪುನರಾವರ್ತನೆಯಾಗಿದೆ. ಸ್ಮಶಾನಗಳ ಕಾಂಪೌಂಡ್ ನಿರ್ಮಾಣಕ್ಕೆ ಮೀಸಲಿಟ್ಟಿರುವ 15 ಲಕ್ಷ ಅನುದಾನ ಯಾವ ಮೂಲೆಗೂ ಆಗದು. ಚಿತಾಗಾರ ನಿರ್ಮಾಣ ಯೋಜನೆ ಕುಂಟುತ್ತಾ ಸಾಗಿದೆ. ಹೊರವಲಯದ ವಾರ್ಡ್ ಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಹೆಚ್ಚಿನ ಅನುದಾನ ನೀಡಬೇಕು. ಈ ಬಜೆಟ್ ಕೇವಲ ಅನುದಾನ ಮೀಸಲಿಗಷ್ಟೇ ಸೀಮಿತವಾಗಿದೆ. ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯೆ ಹಂಸಪ್ರಿಯಾ ಮಾತನಾಡಿ, ಆದಾಯದ ಮೂಲಗಳನ್ನು ನಾವೆಲ್ಲರೂ ಮರೆಯುತ್ತಿದ್ದೇವೆ. ಬರೀ ಖರ್ಚುಗಳ ಪಟ್ಟಿ ತೋರಿಸಿದರೆ ಸಾಲದು. ವಾಡ ವಾರು ಅವಶ್ಯಕತೆ ಅರಿತು ಅನುದಾನ ಮೀಸಲಿಡಬೇಕು ಎಂದರು.
ಮತ್ತೊಬ್ಬ ಸದಸ್ಯೆ ವತ್ಸಲಾ ಮಾತನಾಡಿ, ಬಜೆಟ್ ನಲ್ಲಿ ಘೋಷಿಸುವ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಬೀದಿನಾಯಿ ಹಾವಳಿ ತಡೆ, ಪ್ಲಾಸ್ಟಿಕ್ ನಿರ್ವಹಣೆ, ಇತ್ಯಾದಿ ಯೋಜನೆಗಳಿಗೆ ಹಣ ತೆಗೆದಿರಿಸುತ್ತಿದ್ದೇವೆ ಹೊರತು ಕಾರ್ಯಕ್ರಮ ಅನುಷ್ಠಾನ ಮಾಡುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಆನಂದ್ ಮಾತನಾಡಿ, ಇದೊಂದು ನಿರಾಶಾದಾಯಕ ಬಜೆಟ್ ನಗರ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಬಜೆಟ್ ನಲ್ಲಿ ರಸ್ತೆ ಅಗಲೀಕರಣದ ಪ್ರಸ್ತಾಪವೇ ಇಲ್ಲ ಬಜೆಟ್ ಖಾಲಿ ಡಬ್ಬ ಎಂದು ಟೀಕಿಸಿದರು.
ಹಿರಿಯ ನಗರಸಭಾ ಸದಸ್ಯ ಎಂ.ಜಿ.ಶ್ರೀನಿವಾಸ್ ಮಾತನಾಡಿ, ನಗರಸಭೆ ಆಯುಕ್ತರು ಹಾಗೂ ಅಧಿಕಾರಿಗಳು ಜಮಾ ಖರ್ಚುಗಳನ್ನು ಸರಿಯಾಗಿ ಇಟ್ಟುಕೊಳ್ಳದ ಕಾರಣ ಇಂತಹ ಆಯವ್ಯಯ ಮಂಡನೆಯಾಗಿದೆ. 67.21 ಕೋಟಿ ಅಂದಾಜು ಆದಾಯವಿದ್ದರೆ, ಖರ್ಚು 65.66ಕೋಟಿ ತೋರಿಸಲಾಗಿದೆ. ಕೇವಲ 1.5 ಕೋಟಿ ಉಳಿತಾಯ ತೋರಿಸಲಾಗಿದೆ. ದಸ್ತಾವೇಜುಗಳು ಸರಿಯಾಗಿದ್ದಿದ್ದರೆ ಉತ್ತಮ ಬಜೆಟ್ ಕೊಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷರು ಮಹಿಳೆ ಎಂಬ ನೆರಳಿನಿಂದ ಹೊರಬಂದು ಜವಾಬ್ದಾರಿ ನಿರ್ವಹಿಸಿಲ್ಲ ಉಳಿದ ಅವಧಿಯಲ್ಲಾದರೂ ತಮ್ಮ ಸಾಮರ್ಥ್ಯ ತೋರಿಸಲಿ ಎಂದು ಹೇಳಿದರು. ಜೊತೆಗೆ ಸ್ಥಳೀಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಮತ್ತೊಬ್ಬ ಹಿರಿಯ ಸದಸ್ಯ ತ.ನ.ಪ್ರಭುದೇವ್ ಮಾತನಾಡಿ, ಕೇವಲ ಅಂಕಿ ಅಂಶದ ಬಜೆಟ್ ಆಗಿದೆ. ವಾಸ್ತವಾಂಶದ ಬಜೆಟ್ ಅಲ್ಲ ಎಂದು ಹೇಳಿದರು.
ನಗರಸಭೆ ಮೂಲಗಳ ಆದಾಯ ಸಮರ್ಪಕವಾಗಿ ಸಂಗ್ರಹವಾದರೆ ಮಾತ್ರ ಅಭಿವೃದ್ಧಿ ಸಾಧ್ಯ ಜಾಹೀರಾತು ಫಲಕಗಳ ಅಳವಡಿಕೆಗೆ ಟೆಂಡರ್ ಕರೆದು ಆದಾಯ ಹೆಚ್ಚಳ ಮಾಡಿಕೊಳ್ಳಬೇಕು. ನಿವೇಶನ, ಜಮೀನು ನೋಂದಣಿಯಲ್ಲಿ ನಗರದ್ದು ಬಹುಪಾಲಿದೆ. ಆದರೆ, ಉಪ ನೋಂದಾಣಾಧಿಕಾರಿಗಳಿಂದ ಈವರೆಗೆ ನಮ್ಮಪಾಲಿನ ಶೇ 2 ರಷ್ಟು ಸೆಸ್ ಹಣ ಬಂದಿಲ್ಲ. ಅಧಿಕಾರಿಗಳು ಕೂಡಲೇ ಪತ್ರ ವ್ಯವಹಾರ ನಡೆಸಬೇಕು ಎಂದು ಸೂಚಿಸಿದರು. ವಿದ್ಯುತ್ ಚಿತಾಗಾರಕ್ಕೆ ಇಟ್ಟಿರುವ ಅನುದಾನ ಸಾಕಾಗದು. ನಗರದಲ್ಲಿ ನೀರಿಗೆ ಬರ ಬಾರದಂತೆ ನೋಡಿಕೊಳ್ಳಲು ಜಕ್ಕಲಮಡಗು ಜೊತೆಗೆ ತಿಪ್ಪಗಾನಹಳ್ಳಿ
ಕೆರೆ, ಗುಂಡಮಗೆರೆ ಕೆರೆ, ಘಾಟಿಯ ವಿಶ್ವೇಶ್ವರಯ್ಯ ನಾಲೆಯಿಂದಲೂ ನೀರು ಬಳಸಿಕೊಳ್ಳುವ ಬಗ್ಗೆ ಸರ್ಕಾರದ ಜೊತೆ ಮಾತನಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಆಯುಕ್ತ ಪರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷೆ ಫರ್ಹಾನ ತಾಜ್ ಇತರರು ಇದ್ದರು.
Post Views: 120