ಕೆರೆಗಳ ವಿಶೇಷ ಅಭಿವೃದ್ದಿಗೆ ತ್ವರಿತ ಕಾರ್ಯೋನ್ಮುಖರಾಗಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಜಿಲ್ಲಾ ವ್ಯಾಪ್ತಿಯ ನಗರ, ಗ್ರಾಮಾಂತರ ಪ್ರದೇಶಗಳ 100 ಕೆರೆಗಳನ್ನು ವಿಶೇಷವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸಿದ್ದತಾ ಕಾರ್ಯಗಳಿಗೆ ಶೀಘ್ರವಾಗಿ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಕೆರೆ, ಕುಂಟೆ, ಕಟ್ಟೆ, ಜಲಾಶಯಗಳನ್ನು ಸಂರಕ್ಷಿಸುವ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ. ಶ್ರೀಧರ ಅವರ ಸಮ್ಮುಖದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರು, ಜಾನುವಾರುಗಳು, ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತೆ ವಿಶೇಷವಾಗಿ ಕೆರೆಗಳನ್ನು ಅಭಿವೃದ್ದಿಪಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿದೆ. ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗುವ ಕೆರೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಕೆರೆಗಳ ಹಸ್ತಾಂತರ, ದಾಖಲೆಗಳ ನಿರ್ವಹಣೆ, ಅನುದಾನ ಬಳಕೆ ಇನ್ನಿತರ ಪೂರ್ವ ಯೋಜನೆ ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.

ಕೆರೆಗಳಲ್ಲಿ ಮಳೆಗಾಲಕ್ಕೂ ಮೊದಲೇ ಹೂಳೆತ್ತುವ ಕಾಮಗಾರಿ ನಿರ್ವಹಿಸಿ, ಜಂಗಲ್ ಕಟಿಂಗ್ ಕಾರ್ಯವನ್ನು ಕೈಗೆತ್ತಿಕೊಳ್ಳಿ, ಗಡಿ ಗುರುತು ಕಾರ್ಯ, ಇತರೆ ಕಾಮಗಾರಿಗಳಿಗೆ ಮುಂದಾಗಿ. ದುರಸ್ಥಿ ಕೆಲಸಗಳಿಗೆ ಸ್ಥಳೀಯವಾಗಿ ಲಭ್ಯವಾಗುವ ಯಂತ್ರೋಪಕರಣಗಳನ್ನು ಬಳಸಿಕೊಂಡು ವೇಗವಾಗಿ ಕೆಲಸ ಪೂರ್ಣಗೊಳಿಸಿ ಎಂದರು.

ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಮೃತ್ 2ರಡಿ ಅಭಿವೃದ್ದಿ ಪಡಿಸಲಿರುವ ಕಾಮಗಾರಿಗಳ ವಿವರ ಅಂದಾಜು ಪಟ್ಟಿಯನ್ನು ಸಲ್ಲಿಸಬೇಕು. ಸಿಎಸ್‍ಆರ್ ಅನುದಾನ ಬಳಸಿಕೊಂಡು ಕೆರೆಗಳ ಅಭಿವೃದ್ದಿ ಮಾಡಬಹುದಾಗಿದೆ. ನರೇಗಾ ಅಡಿ ಕೆಲಸ ಪ್ರಾರಂಭಿಸಿದ್ದಲ್ಲಿ ಆದ್ಯತೆ ಮೇರೆಗೆ ಮುಗಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಕೆಲವು ಕೆರೆಗಳ ಆರ್.ಟಿಸಿ ಇಂಡೀಕರಣ ಬಾಕಿಯಿದ್ದು, ತ್ವರಿತವಾಗಿ ಇತ್ಯರ್ಥಪಡಿಸಿ ಸರ್ವೆಗೆ ಬಾಕಿ ಇರುವ, ಒತ್ತುವರಿಯಾಗಿರುವ ಹಾಗೂ ಒತ್ತುವರಿ ತೆರವುಗೊಳಿಸಿರುವ, ಹಸ್ತಾಂತರಕ್ಕೆ ಬಾಕಿ ಇರುವ ಕೆರೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಪಟ್ಟಿಯೊಂದಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ. ಶ್ರೀಧರ ಅವರು ಮಾತನಾಡಿ ಇಲಾಖೆಗಳಿಗೆ ಹಸ್ತಾಂತರವಾಗಿರುವ ಕೆರೆಗಳನ್ನು ಮುಂದೆ ಒತ್ತುವರಿಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಜಿಲ್ಲಾಧಿಕಾರಿಗಳು ಈಗಾಗಲೇ ನೀಡಿರುವ ನಿರ್ದೇಶನದಂತೆ ಅಧಿಕಾರಿಗಳು ಕ್ರಮವಹಿಸಿದರೆ ಜಿಲ್ಲೆಯ ಕೆರೆಗಳು ಉತ್ತಮ ಸ್ಥಿತಿಗೆ ಬರಲಿವೆ. ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಉಪವಿಭಾಗಾಧಿಕಾರಿ ಎಂ. ಶಿವಮೂರ್ತಿ, ಕಾವೇರಿ ನೀರಾವರಿ ನಿಗಮ, ನೀರಾವರಿ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

ವರದಿ ಆರ್ ಉಮೇಶ್ ಮಲಾರಪಾಳ್ಯ