ರಾಜಘಟ್ಟ ಗ್ರಾಮದಲ್ಲಿ ವಾರದಿಂದ ನಿರಂತರ ಕಳವು ಪ್ರಕರಣಗಳು, ದೊಣ್ಣೆ ಹಿಡಿದು ಕಾವಲು ಕಾಯುತ್ತಿರುವ ಗ್ರಾಮದ ಯುವಕರು.
ದೊಡ್ಡಬಳ್ಳಾಪುರ : ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಕಳೆದೊಂದು ವಾರದಿಂದ ಕಳವು ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ, ಮನೆಗಳ್ಳತನ, ಕುರಿ ಮೇಕೆ ಕಳವು, ಬೈಕ್ ಕಳವು, ಆಟವಾಡುತ್ತಿದ್ದ ಮಕ್ಕಳ ಚಿನ್ನಾಭರಣ ಕಳವು, ಕೋಳಿ ಕಳವು, ಸಾಲು ಸಾಲಾಗಿ ಕಳವು ನಡೆಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ, ಗ್ರಾಮದ ರಕ್ಷಣೆಗೆ ಮುಂದಾಗಿರುವ ಯುವಕರ ಗುಂಪು ಕೈಯಲ್ಲಿ ದೊಣ್ಣೆ ಹಿಡಿದು ಕಾವಲು ಕಾಯುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರದಿಂದ 9 ಕಿ.ಮೀ ದೂರದಲ್ಲಿರುವ ರಾಜಘಟ್ಟ ಗ್ರಾಮದಲ್ಲಿ ಸರಣಿ ಕಳವು ಪ್ರಕರಣಗಳಿಗೆ ಸಾಕ್ಷಿಯಾಗಿದ್ದು, ಕಳೆದೊಂದು ವಾರದಿಂದ ನಡೆಯುತ್ತಿರುವ ಸರಣಿ ಕಳ್ಳತನ ಪ್ರಕರಣಗಳಿಂದ ಜನ ಹೊರ ಬರುವುದಕ್ಕೂ ಹೆದರುವಂತಾಗಿದೆ. ಗಾರೆ ಕೆಲಸ ಮಾಡುವ ರಾಜಣ್ಣ ಸೋಮವಾರ ರಾತ್ರಿ ತಮ್ಮ ಮನೆಗೆ ಬೀಗ ಹಾಕಿ ತಮ್ಮನ ಮನೆಯಲ್ಲಿ ಮಲಗಿದ್ರು, ಮನೆಯ ಬಾಗಿಲನ್ನು ಗಡಾರಿಯಿಂದ ಮೀಟಿರುವ ಕಳ್ಳರು ಬೀರುವಿನಲ್ಲಿದ್ದ ಒಡವೆಗಳನ್ನು ಕದ್ದೊಯ್ದಿದ್ದಾರೆ, ಇದೇ ರೀತಿ ಅನಿಲ್ ಎಂಬುವರ ಮನೆಯಲ್ಲೂ ಕಳ್ಳತನ ಪ್ರಕರಣಕ್ಕೆ ನಡೆದಿದೆ, ಮನೆಗೆ ಬೀಗ ಹಾಕಿದ ಅನಿಲ್ ಕುಟುಂಬ ಸಂಬಂಧಿಕರ ಮನೆಗೆ ಹೋಗಿದ್ರು, ಈ ವೇಳೆ ಮನೆಯ ಬಾಗಿಲು ಹೊಡೆದು ಒಳ ನುಗ್ಗಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.
ಗಾರೆ ಒಬಳೇಶ್ ರವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳರ ಪಾಲಾಗಿದೆ. ವೆಂಕಟಸ್ವಾಮಿ ಮತ್ತು ರಾಜಣ್ಣರವರ ಕುರಿ ಮತ್ತು ಮೇಕೆಗಳ ಕಳುವಾಗಿದೆ, ಅಲ್ಲದೆ ಗುಮಣ್ಣನವರ 15 ನಾಟಿ ಕೋಳಿಗಳ ಕಳವು ಸಹ ಆಗಿದೆ. ಕುಂಟಮ್ಮನವರ ಮೊಮ್ಮಗಳು ಸ್ನೇಹಿತರ ಜೊತೆಯಲ್ಲಿ ಆಡುತ್ತಿದ್ದ ವೇಳೆ ಬಾಲಕಿಯ ಕೊರಳಿನಲ್ಲಿದ್ದ ಗುಂಡುಗಳನ್ನ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಗ್ರಾಮದಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಕಳ್ಳತನಕ್ಕೆ ಜನರು ಆತಂಕಕ್ಕೆ ಒಳಗಾಗಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಗ್ರಾಮದ ಯುವಕರೇ ಗ್ರಾಮದ ರಕ್ಷಣೆಗೆ ಮುಂದಾಗಿದ್ದು, ರಾತ್ರಿ ವೇಳೆ ಕಾವಲು ಕಾಯಲು ಯುವಕರ ತಂಡಗಳನ್ನ ಮಾಡಿದ್ದು, ಕೈಯಲ್ಲಿ ದೊಣ್ಣೆಗಳನ್ನ ಹಿಡಿದು ಕಾವಲು ಕಾಯುತ್ತಿದ್ದಾರೆ.