ದೊಡ್ಡಬಳ್ಳಾಪುರ ತಾಲೂಕು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ. ಅಧ್ಯಕ್ಷರಾಗಿ ಆಂಜಿನಪ್ಪ, ಉಪಾಧ್ಯಕ್ಷರಾಗಿ ರವಿಕುಮಾರ್,ಬಸವರಾಜ್, ಕಾಂತರಾಜ್.
ದೊಡ್ಡಬಳ್ಳಾಪುರ : 1985ರ ಉಳುವುದಕ್ಕೆ ಭೂಮಿಕೊಡಿ ವಾಸ ಮಾಡಲು ನಿವೇಶನ ಕೊಡಿ ಎಂಬ ಧ್ಯೇಯ ವಾಕ್ಯದಂತೆ ಅಂದಿನಿಂದ ಇಂದಿನವರೆಗೂ ರಾಜ್ಯಾದ್ಯಂತ ನಿವೇಶನ ಹಾಗೂ ಭೂಮಿ ಕುರಿತು ಸತತ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ .ಸ್ಥಳೀಯವಾಗಿ ದೊಡ್ಡಬಳ್ಳಾಪುರದಲ್ಲಿ ನೂರಾರು ಭೂ ಹೋರಾಟಗಳು ನಡೆದಿವೆ ಸ್ಥಳೀಯ ಮುಖಂಡರು ಹಾಗೂ ಸಂಘಟನೆಯ ರಾಜ್ಯ ಉಪ ಸಂಚಾಲಕರು ಆದ ಪಿಳ್ಳಪ್ಪ ನವರ ನೇತೃತ್ವದಲ್ಲಿ ಮುಂದೆಯೂ ಹೋರಾಟಕ್ಕೆ ಮುಂದಾಗುತ್ತೇವೆ ಏನು ದಲಿತ ಸಂಘರ್ಷ ಸಮಿತಿ (ಸಂಘರ್ಷ ಸಮಿತಿ ) ಯ ರಾಜ್ಯಾಧ್ಯಕ್ಷರಾದ ಡಾ. ಅಶ್ವಥ್ ನಾರಾಯಣ ತಿಳಿಸಿದರು.
ದೊಡ್ಡಬಳ್ಳಾಪುರ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ದೊಡ್ಡಬಳ್ಳಾಪುರ ತಾಲ್ಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಂತರ ಮಾತನಾಡಿದ ಅವರು ನಮ್ಮ ಸಂಘಟನೆ ಬಲಿಷ್ಟವಾಗಿದೆ ಸಮಾಜದಲ್ಲಿ ನೆಡೆಯುವ ಅನ್ಯಾಯಗಳ ವಿರುದ್ಧ ನಮ್ಮ ಸಮಿತಿ ಹೋರಾಟ ಸದಾ ಜೀವಂತ.ಸಂವಿಧಾನವೇ ನಮ್ಮ ಶಕ್ತಿ ನ್ಯಾಯ ಪರ ಹೋರಾಟಕ್ಕೆ ನಾವು ಸದಾ ಸಿದ್ದ ಎಂದು ತಿಳಿಸಿದರು.
ರಾಜ್ಯ ಉಪಸಂಚಲಕರಾದ ಪಿಳ್ಳಪ್ಪ ಮಾತನಾಡಿ ದಲಿತರ ವಿಷಯದಲ್ಲಿ ರಾಜಕೀಯ ನಾಯಕರು ಕೇವಲ ನಟಿಸುತ್ತಾರೆ ಇಂದಿಗೂ ನಮ್ಮ ರಾಜ್ಯದಲ್ಲಿ ಎಷ್ಟೋ ರೈತರಿಗೆ ಸಾಗುವಳಿ ಪತ್ರಗಳನ್ನು ನೀಡಲಾಗಿಲ್ಲ ಅದನ್ನು ಪ್ರಶ್ನಿಸುವ ನಾಯಕರು ನಮ್ಮಲ್ಲಿ ಇಲ್ಲದಿರುವುದು ನಮ್ಮ ದೌರ್ಭಾಗ್ಯ. ನಮ್ಮ ಸಮಿತಿ ಉದ್ದೇಶ ನೇರ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ವಿರುದ್ದ ನಮ್ಮ ಹೋರಾಟ ಅದು ಎಂದಿಗೂ ನಿಲ್ಲುವುದಿಲ್ಲ .ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳಂತೆ ಸಮಾಜದಲ್ಲಿ ಸಮಾನತೆ ,ಶಾಂತಿಯುತ ಸಹಬಾಳ್ವೆ ನಮ್ಮ ಉದ್ದೇಶ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
ದಲಿತ ಮುಖಂಡರಾದ ಹಾಲೇನಹಳ್ಳಿ ರವಿಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಎದುರಿಸಲು ನಮ್ಮ ಈ ಸಂಘಟನೆಯನ್ನು ಕಟ್ಟಲಾಗಿದೆ ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯಗಳ ಬುನಾದಿಯಲ್ಲಿ ನಾವು ಸಾಗುತ್ತಿದ್ದೇವೆ .ಇಲ್ಲಿನ ಭೂ ಹಗರಣಗಳಿಂದಾಗಿ ತಾಲ್ಲೂಕಿನಲ್ಲಿ ಬೆಟ್ಟ ಗುಡ್ಡಗಳು ಕಣ್ಮರೆಯಾಗುತ್ತಿವೆ ಗೋಮಾಳಗಳು ಮಾಯವಾಗುತ್ತಿವೆ. ದಲಿತರ ದೂರು ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆ ಈ ವ್ಯವಸ್ಥೆ ಬದಲಾಗಬೇಕಿದೆ .ಹೋರಾಟದ ಮೂಲಕ ಸಮಾಜದಲ್ಲಿ ಬದಲಾವಣೆಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಗಳಾದ ರಾಮಾಂಜಿನಪ್ಪ ಮಾತನಾಡಿ ಇತ್ತೀಚಿನ ಸಂಘಟನೆಗಳು ರಾಜಕೀಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿಗೆ ತಲುಪಿವೆ .ಇದು ಒಡೆದು ಆಳುವ ನೀತಿಗೆ ಉತ್ತಮ ಉದಾಹರಣೆಯಾಗಿದೆ ಜಾತಿ ಹೆಸರಿನಲ್ಲಿ ಸಂಘಟನೆ ಕಟ್ಟುವ ಮೂಲಕ ನಮ್ಮಲ್ಲಿ ಒಗ್ಗಟ್ಟನ್ನು ಓಡೆಯುತ್ತಿದ್ದಾರೆ. ಸ್ವಯಂಘೋಷಿತ ರಾಜ್ಯಾಧ್ಯಕ್ಷರು, ಅಧ್ಯಕ್ಷರು ಆಗುವ ಕೆಲವು ಮಂದಿಯಿಂದ ಸಮುದಾಯಕ್ಕೆ ಯಾವುದೇ ಉಪಯೋಗ ಇಲ್ಲದಿರುವುದು ಶೋಚನೀಯ ಸಂಗತಿ .ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಕ್ಕೆ ನಿವೇಶನ ಹಂಚಿಕೆಯಾದ ಉದಾಹರಣೆ ಎಲ್ಲೂ ಕಾಣುತ್ತಿಲ್ಲ ,ಪ್ರಸ್ತುತ ದಲಿತರು ವಾಸಿಸುವ ಸ್ಥಳಗಳಿಗೆ ಭೇಟಿ ಕೊಟ್ಟರೆ ಒಂದು ಕುಟುಂಬ ವಾಸಿಸುವ ಸ್ಥಳದಲ್ಲಿ 3 ರಿಂದ 4 ಕುಟುಂಬಗಳು ಸಣ್ಣ ಸಣ್ಣ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ ಈ ಪರಿಸ್ಥಿತಿ ಯಾವ ರಾಜಕಾರಣಿಗಳಿಗೂ ಕಾಣದಿರುವುದು ವಿಪರ್ಯಾಸ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ರಾಜ್ ಕುಮಾರ್, ಉಪ ಕಾರ್ಯದರ್ಶಿ ಮಲ್ಲೇಶ್ , ಸಂಘಟನಾ ಕಾರ್ಯದರ್ಶಿ ಚನ್ನಕದರಯ್ಯ, ಕಸಬಾ ಅಧ್ಯಕ್ಷರಾದ ಕೃಷ್ಣಯ್ಯ, ದೊಡ್ಡಬೆಳವಂಗಲ ಹೋಬಳಿ ಘಟಕದ ಅಧ್ಯಕ್ಷರಾದ ವೆಂಕಟಅರಸಯ್ಯ, ನಗರ ಘಟಕದ ಅಧ್ಯಕ್ಷರಾದ ಮೂರ್ತಿ, ಮಧುರೆ ಹೋಬಳಿ ಘಟಕದ ಅಧ್ಯಕ್ಷರಾದ ನಾಗರಾಜು ಆಯ್ಕೆಯಾದರು, ಈ ಸಮಯದಲ್ಲಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ , ಪೂರ್ವ ಜಿಲ್ಲಾ ಸಂಯೋಜಕರಾದ ಏಚ್.ನಾರಾಯಣ ಸ್ವಾಮಿ, ಮಹಿಳಾ ಸಂಯೋಜಕರಾದ ಗಂಗಮ್ಮ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.