ದುಗ್ಗಹಟ್ಟಿ, ಅಂಬಳೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಸಂವಿಧಾನ ಜಾಗೃತಿ ಜಾಥಾ

ಯಳಂದೂರು:ಪ್ರತಿಯೊಬ್ಬ ಭಾರತೀಯ ಪ್ರಜೆಯು ಸಮಾಜದಲ್ಲಿ ಸೂಕ್ತ ಸ್ಥಾನಮಾನ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಲು ಸಂವಿಧಾನ ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದು ಮಾಂಬಳ್ಳಿ ಶಾಲೆಯ ಶಿಕ್ಷಕರಾದ ಮಹದೇವು ಅವರು ತಿಳಿಸಿದರು.

ಯಳಂದೂರು ತಾಲ್ಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದು ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.

ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.

ಸ್ವಾತಂತ್ರ್ಯ ಭಾರತದ ನಂತರದ ದಿನಗಳಲ್ಲಿ ದೇಶದಲ್ಲಿ ಅನೇಕ ಸವಾಲುಗಳು ಎದುರಾದ ಸಂದರ್ಭದಲ್ಲಿ ದೇಶದ ಆಡಳಿತ ನಿರ್ವಹಣೆಗಾಗಿ ಕಾನೂನಿನ ಅವಶ್ಯಕತೆ ಕಂಡುಬರುತ್ತದೆ. ದೇಶವನ್ನು ಏಕತೆಯಿಂದ ನಡೆಸಲು ಒಂದು ಕಾನೂನು ಸುವ್ಯವಸ್ಥೆಯನ್ನು ರೂಪಿಸುವ ಸಂವಿಧಾನ ಅವಶ್ಯಕತೆ ಇರುವುದನ್ನು ಮನಗಂಡು ಡಾ. ಬಾಬು ರಾಜೇಂದ್ರ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನ ಸಭೆ ನಡೆಸಿ ಸಂವಿಧಾನ ಕರುಡು ರಚಿಸಲು ಸಮಿತಿಯನ್ನು ರಚಿಸಿ ಆ ಸಮಿತಿಗೆ ಡಾ. ಬಿ.ಆರ್ ಅಂಬೇಡ್ಕರ್‍ರವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಎಂದು ತಿಳಿಸಿದರು.

ಡಾ. ಬಿ.ಆರ್ ಅಂಬೇಡ್ಕರ್ ರವರು ಅನೇಕ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಒಳಗೊಂಡ ಒಂದು ಬೃಹತ್ ಲಿಖಿತ ಸಂವಿಧಾನವನ್ನು ರಚಿಸಿ 1949 ನವೆಂಬರ್ 26 ರಂದು ಅಂಗೀಕರಿಸಲಾಯಿತು. ಈ ಸಂವಿಧಾನವನ್ನು 1950 ಜನವರಿ 26 ರಂದು ಜಾರಿಗೊಳಿಸಲಾಯಿತು ಎಂದು ಶಿಕ್ಷಕರಾದ ಮಹದೇವು ಅವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ ರವರು ಮಾತನಾಡಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನ ಸ್ವಾತಂತ್ರ್ಯ, ಸಮಾನತೆಯನ್ನು ನೀಡಿ ಸರ್ವರ ಏಳಿಗೆಗೂ ನೆರವಾಗಿದೆ. ಇಂದಿನ ಮಕ್ಕಳು ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಂಡು ಜಾಗೃತರಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಕೇಂದ್ರಕ್ಕೆ ಪುಸ್ತಕ ಜೋಳಿಗೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪುಸ್ತಕಗಳನ್ನು ನೀಡಲಾಯಿತು. ದೇಶಭಕ್ತಿ ಗೀತೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಸಂವಿಧಾನ ಪೀಠಿಕೆ ಬೋಧಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯಿತ್ರಿ, ಉಪಾಧ್ಯಕ್ಷರಾದ ಸಾವಿತ್ರಿ ಜಿ.ಎನ್, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಣ್ಣ, ಗ್ರಾಮದ ಯಜಮಾನರು, ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಂವಿಧಾನ ಜಾಗೃತಿ ಜಾಥಾದಲ್ಲಿ ಸತ್ತಿಗೆ ಸೂರಪಾನಿ ಕಲಾತಂಡಗಳ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ಎಲ್ಲರ ಗಮನ ಸೆಳೆಯಿತು.

ಅಂಬಳೆ ಗ್ರಾಮದಲ್ಲೂ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮದಲ್ಲಿ ವೀರಗಾಸೆ, ಎತ್ತಿನಗಾಡಿ ಮೆರವಣಿಗೆ ಪೂರ್ಣಕುಂಭ, ಸತ್ತಿಗೆ ಸೂರಪಾನಿ, ಇನ್ನಿತರ ಕಲಾತಂಡಗಳೊಂದಿಗೆ ಸಂಭ್ರಮದಿಂದ ಸ್ವಾಗತಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂಜುಂಡಸ್ವಾಮಿ, ಉಪಾಧ್ಯಕ್ಷರಾದ ಶ್ವೇತಾ ಉಪಸ್ಥಿತರಿದ್ದರು. ಬಿಎಡ್ ಕಾಲೇಜಿನ ಉಪನ್ಯಾಸಕರಾದ ಶ್ರೀಕಾಂತ್ ಅವರು ಸಂವಿಧಾನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಸಂವಿಧಾನ ಪೀಠಿಕೆ ಬೋಧಿಸಿದರು