ಬೆಂಗಳೂರಿನಲ್ಲಿ ಇರುವ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸುವಂತೆ ಒತ್ತಾಯ.

ದೊಡ್ಡಬಳ್ಳಾಪುರ:ಬೆಂಗಳೂರಿನಲ್ಲಿ ಇರುವ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು, 15 ದಿನದೊಳಗೆ ಬೇಡಿಕೆ ಈಡೆರದಿದ್ದಲ್ಲಿಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆಯನ್ನು ನೀಡಿದರು.

ದೇವನಹಳ್ಳಿಯ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಸುಡುತ್ತಿದ್ದ ಬಿಸಿಲಿನಲ್ಲಿ ಕುಳಿತು ಮೌನ ಪ್ರತಿಭಟನೆಯನ್ನ ನಡೆಸಿದರು, ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಮರೇಶ್.ಎಚ್ ಅವರಿಗೆ ಮನವಿ ನೀಡಿದ ಪ್ರತಿಭಟನಕಾರರು ಬೆಂಗಳೂರಿನಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ದೊಡ್ಡಬಳ್ಳಾಪುರ ಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.

ನಂತರ ಮಾತನಾಡಿದ ಹೋರಾಟ ಸಮಿತಿಯ ಮುಖಂಡರಾದ ವಸಂತ್ ಕುಮಾರ್, ದೊಡ್ಡಬಳ್ಳಾಪುರದಲ್ಲಿ ನೂರಾರು ಕೈಗಾರಿಕೆಗಳಿವೆ ಮತ್ತು ಈಗ ಹೊಸ ಕೈಗಾರಿಕಾ ಪ್ರದೇಶಗಳು ಸಹ ಸ್ಥಾಪನೆಯಾಗುತ್ತಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರದಲ್ಲಿ ಇಲ್ಲ, ಕೈಗಾರಿಕೆಗಳಿಂದ ಆಗುತ್ತಿರುವ ಸಮಸ್ಯೆಗಳನ್ನ ಬಗ್ಗೆ ಹೇಳಲು ಇಲ್ಲಿಂದ 40 ಕಿ.ಮೀ ದೂರದಲ್ಲಿರುವ ಬೆಂಗಳೂರಿಗೆ ಹೋಗ ಬೇಕಿದೆ. ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯದ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ರೆ, ಅವರು ಬಂದು ಪರಿಶೀಲನೆ ಮಾಡುವಷ್ಟರಲ್ಲಿ ಎರಡು ದಿನವಾಗಿರುತ್ತೆ, ಇದರಿಂದ ಅಧಿಕಾರಿಗಳಿಗೂ ಯಾವುದೇ ಸಾಕ್ಷಿಗಳು ಸಿಗದಂತೆ ಆಗಿದೆ. 15 ದಿನದೊಳಗೆ ಬೆಂಗಳೂರಿನಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸ ಬೇಕು, ಇಲ್ಲದಿದ್ದಾರೆ ಅಮಾರಣಾಂತಿಕ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆಯನ್ನು ನೀಡಿದರು.

ನಾಗರಾಜು ಬಾಬು ಮಾತನಾಡಿ, ಅರ್ಕಾವತಿ ನದಿ ಪಾತ್ರದ ಕೆರೆಗಳು ವಿಷವಾಗಲು ಕೈಗಾರಿಕೆಗಳ ತ್ಯಾಜ್ಯ ನೀರು ಕಾರಣವಾಗಿದೆ, ಶುದ್ಧಿಕರಣ ಮಾಡದೆ ನೇರವಾಗಿ ರಸಾಯನಿಕ ತ್ಯಾಜ್ಯ ನೀರನ್ನು ಕೆರೆಗಳಿಗೆ ಬಿಡಲಾಗುತ್ತಿದೆ, ಕೆರೆಯ ನೀರು ಕಲುಷಿತಗೊಂಡಿದ್ದು, ಕುಡಿಯುವ ನೀರು ವಿಷವಾಗಿದೆ, ಇದರಿಂದ ಜನರು ಮಾರಾಣಾಂತಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಕೆರೆಯ ನೀರನ್ನು ಕುಡಿದು ಜಾನುವಾರುಗಳು ಸಾವನ್ನಪ್ಪಿವೆ, ಕೈಗಾರಿಕೆಗಳಿಗೆ ಕಡಿವಾಣ ಹಾಕಲು ದೊಡ್ಡಬಳ್ಳಾಪುರಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯನ್ನ ಸ್ಥಳಾಂತರಿಸ ಬೇಕು ಎಂದರು.

ಮೌನ ಪ್ರತಿಭಟನೆಯಲ್ಲಿ ಸಂತೋಷ್, ವಿಜಯ್ ಕುಮಾರ, ಮುನಿಕೃಷ್ಣಪ್ಪ ,ಆಂಜಿನಪ್ಪ ,ಗಿಡ್ಡೇಗೌಡ ಮುನಿಯಪ್ಪ ,ಗೋಪಾಲ್ ಕೃಷ್ಣ ,ರಾಜಣ್ಣ ಇದ್ದರು.