ವಿವಿಧ ಕೆರೆಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ನ್ಯಾಯಾಧೀಶರಾದ ಎಂ. ಶ್ರೀಧರ ಭೇಟಿ : ಪರಿಶೀಲನೆ

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಇಂದು ಚಾಮರಾಜನಗರ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ ಒತ್ತುವರಿ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು.

ಅಧಿಕಾರಿಗಳೊಂದಿಗೆ ತಾಲೂಕಿನ ಕೋಡಿಮೋಳೆ ಕೆರೆ, ನಾಗವಳ್ಳಿ ಕೆರೆ, ಜ್ಯೋತಿಗೌಡನಪುರ ಕೆರೆ, ಕಾಗಲವಾಡಿ ಕೆರೆ, ಹೊಂಗನೂರು ಕೆರೆ, ಹೊಂಡರಬಾಳು ಕೆರೆ, ಇನ್ನಿತರ ಕೆರೆಗಳನ್ನು ವ್ಯಾಪಕವಾಗಿ ವೀಕ್ಷಿಸಿದರು.

ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆರೆಗಳ ವಿಸ್ತೀರ್ಣ, ಒತ್ತುವರಿಯಾಗಿರುವ ಭಾಗಗಳು, ಕೆರೆಗಳ ಅಭಿವೃದ್ದಿ ಕುರಿತ ಮಾಹಿತಿಯನ್ನು ಅಧಿಕಾರಿಗಳಿಂದ ಆಯಾ ಸ್ಥಳದಲ್ಲಿಯೇ ಪಡೆದು ಪರಿಶೀಲನೆ ನಡೆಸಿದರು.

ಕೆರೆಗಳ ಹದ್ದುಬಸ್ತು ಮಾಡಿ ಒತ್ತುವರಿ ತೆರವಿಗೆ ಅಗತ್ಯ ಮುಂದಿನ ಕ್ರಮ ವಹಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಭೇಟಿಯ ವೇಳೆ ಆಯಾ ಭಾಗದ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ನ್ಯಾಯಾಧೀಶರಿಗೆ ಅಹವಾಲು ಸಲ್ಲಿಸಿ ಕೆರೆಗಳನ್ನು ಅಭಿವೃದ್ದಿಗೊಳಿಸಬೇಕು. ಕೆಲವೆಡೆ ಕೆರೆಗಳಿಗೆ ತ್ಯಾಜ್ಯ ನೀರು ಸೇರುತ್ತಿರುವುದನ್ನು ತಡೆಯಬೇಕೆಂದು ಮನವಿ ಮಾಡಿದರು.

ಕೆಲವೆಡೆ ಕೆರೆಗಳಿಗೆ ಹರಿಯಬಿಟ್ಟಿರುವ ಕಲುಷಿತ ನೀರು ಸೇರದಂತೆ ಕೂಡಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಬೇಕು. ತ್ಯಾಜ್ಯ ವಸ್ತುಗಳನ್ನು ಕೆರೆಯ ಬಳಿ ಹಾಕುವುದನ್ನು ತಡೆಗಟ್ಟಬೇಕು. ಕೆರೆಯ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡಬೇಕು. ಸ್ವಚ್ಚ ಪರಿಸರ ಇರಬೇಕೆಂದು ಜಿಲ್ಲಾಧಿಕಾರಿಯವರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾಮಗಾರಿ ನಿರ್ವಹಿಸಿರುವ ಸ್ಥಳದಲ್ಲಿ ಅಳವಡಿಸಿರುವ ಮಾಹಿತಿ ಫಲಕಗಳನ್ನು ಸರಿಪಡಿಸುವಂತೆ ಸೂಚಿಸಿದರು. ಅನುದಾನ ಲಭ್ಯತೆಗೆ ಅನುಗುಣವಾಗಿ ಕೆರೆಗಳ ಹೂಳೆತ್ತುವುದು, ಅಭಿವೃದ್ದಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ನರೇಗಾ ಅನುದಾನವನ್ನು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಸದ್ಬಳಕೆಯಾಗಬೇಕು. ಸ್ಥಳೀಯವಾಗಿ ಕೆಲಸ ನೀಡಬೇಕು. ಕೆರೆಗಳ ಅಭಿವೃದ್ದಿ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ಕೆರೆಗಳ ಸಂರಕ್ಷಣೆ ಆಗಬೇಕು ಎಂದು ಸೂಚಿಸಲಾಯಿತು.

ತಹಶೀಲ್ದಾರ್ ಬಸವರಾಜು, ಭೂ ದಾಖಲೆಗಳ ಉಪ ನಿರ್ದೇಶಕರಾದ ವಿದ್ಯಾಯಿನಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಎಂ.ಬಿ. ಪಾಟೀಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಟಿ. ಜಯರಾಮ್, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ನಿರಂಜನ್, ಇನ್ನಿತರ ಇಲಾಖೆಯ ಅಧಿಕಾರಿಗಳು ಇದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ