ಅಶಕ್ತ, ಅವಶ್ಯಕತೆಯ ವಲಯಕ್ಕೆ ನೆರವು ಅಗತ್ಯ… ಲಯನ್ಸ್ ರಾಜ್ಯಪಾಲ ನಾಗರಾಜ್..

ಅಶಕ್ತ, ಅವಶ್ಯಕತೆಯ ವಲಯಕ್ಕೆ ನೆರವು ಅಗತ್ಯ… ಲಯನ್ಸ್ ರಾಜ್ಯಪಾಲ ನಾಗರಾಜ್

ಸಾಮಾಜಿಕ ಸೇವಾ ಕಾರ್‍ಯಗಳು ಸಂಘಟನೆಗಳ ಅವಿಭಾಜ್ಯ ಅಂಗವಾಗಬೇಕು. ಅಶಕ್ತ ಹಾಗೂ ಅವಶ್ಯಕತೆಯುಳ್ಳ ವಲಯಕ್ಕೆ ಸೇವೆಯ ಮೂಲಕ ನೆರವು ಒದಗಿಸುವುದು ಲಯನ್ಸ್ ಕ್ಲಬ್‌ನ ಧ್ಯೇಯವಾಗಿದೆ ಎಂದು ಲಯನ್ಸ್ ಜಿಲ್ಲೆ 317ಎಫ್‌ನ ರಾಜ್ಯಪಾಲ ಬಿ.ಎಸ್.ನಾಗರಾಜ್‌ ಹೇಳಿದರು.
ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌, ಅಕ್ಷಯ ಲಿಯೋ ಕ್ಲಬ್‌ಗಳಿಗೆ ಜಿಲ್ಲಾ ರಾಜ್ಯಪಾಲರ ವಾರ್ಷಿಕ ಅಧಿಕೃತ ಭೇಟಿಯ ವೇಳೆ ಎಸ್‌ಡಿಯುಐಆರ್‌ಎಸ್ ಸಭಾಂಗಣದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು
ಅಪೌಷ್ಠಿಕತೆ ನಿವಾರಣೆ ಉದ್ದೇಶದಿಂದ ಜಾರಿಗೊಳಿಸಲಾಗಿರುವ ನ್ಯೂಟ್ರಿಷನ್ ಸಪ್ಲಿಮೆಂಟ್‌ ವಿತರಣೆ ಕಾರ್ಯವನ್ನು ತಾಲೂಕಿನ 48 ಸರ್ಕಾರಿ ಶಾಲೆಗಳಲ್ಲಿ ದಿನನಿತ್ಯ ಜಾರಿಗೊಳಿಸಿರುವುದು ಮತ್ತು ಕ್ವೆಸ್ಟ್‌ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವುದು ಆರ್.ಎಲ್.ಜಾಲಪ್ಪ ಲಯನ್ಸ್‌ ಕ್ಲಬ್‌ನ ಹೆಗ್ಗಳಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಹಾಗೂ ಆಡಳಿತಾತ್ಮಕ ಕಾರ್‍ಯಗಳ ಮೂಲಕ ಲಯನ್ಸ್ ಜಿಲ್ಲೆ 317ಎಫ್‌ನಲ್ಲಿ ಛಾಪನ್ನು ಮೂಡಿಸಲು ಯಶಸ್ವಿಯಾಗಿದೆ ಎಂದರು.

ಹಲವರಿಗೆ ಸವಲತ್ತು ವಿತರಣೆ:

ಇದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ದಿವ್ಯಾಂಗ ಫಲಾನುಭವಿಗೆ ಆರ್ಥಿಕ ನೆರವು, ಆಶಾ ಕಾರ್ಯಕರ್ತೆಯರು, ಮಹಿಳಾ ಅಂಚೆ ಸಿಬ್ಬಂದಿ, ಪೌರಕಾರ್ಮಿಕರು, ಬಡಗಿ, ವಾಹನ ಚಾಲಕರು, ಕ್ಲೀನರ್‌ಗಳಿಗೆ ವಿವಿಧ ಸವಲತ್ತು ವಿತರಣೆ, ಅಭಿನಂದನೆ ನಡೆಯಿತು. ಇದೇ ವೇಳೆ ಸಂಸ್ಥೆಯ “ಅನಾವರಣ” ತ್ರೈಮಾಸಿಕ ಸುದ್ದಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

15ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳ ಆಯೋಜನೆ:

ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಹಿನ್ನಲೆಯಲ್ಲಿ ಸಂಸ್ಥೆಯ ವತಿಯಿಂದ ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಧುಮೇಹ ತಪಾಸಣೆ, ಹಸನಘಟ್ಟ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ವಾಹನಗಳ ವಾಯುಮಾಲಿನ್ಯ ತಪಾಸಣೆ, ಸಾಕುನಾಯಿಗಳಿಗೆ ಲಸಿಕೆ, ವಿಜಯಲಕ್ಷ್ಮಿ ಪೆಟ್ರೋಲ್‌ ಬಂಕ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ಉಚಿತ ಆಯಿಲ್ ಸರ್ವೀಸ್, ಗಿಡ ನೆಡುವ ಕಾರ್ಯಕ್ರಮ, ಚೇತನ ಶಾಲೆಯಲ್ಲಿ ದಂತ ತಪಾಸಣೆ ಶಿಬಿರ, ಘಾಟಿ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಗೋಪೂಜೆ, ಮೇವು ಸಹಾಯಧನ ವಿತರಣೆ, ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ, ಜಾಲಪ್ಪ ಆಟೋ ನಿಲ್ದಾಣದಲ್ಲಿ ಲಯನ್ಸ್ ಸ್ವಾಗತ ಫಲಕ ಅನಾವರಣ, ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ, ದೇವರಾಜ ಅರಸ್‌ ಪದವಿ ಕಾಲೇಜಿನಲ್ಲಿ ಸೈಬರ್‌ ಜಾಗೃತಿ ಕಾರ್ಯಕ್ರಮ, ವಸತಿ ಶಾಲೆ ಆವರಣದಲ್ಲಿ ಹಕ್ಕಿಗೂಡುಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಸಂಪುಟ ಕಾರ್‍ಯದರ್ಶಿ ವಿ.ಕೆ.ರಾಜೇಶ್, ಖಜಾಂಚಿ ಆರ್.ಕೆ.ಹೆಗಡೆ, ಪ್ರಾಂತಿಯ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ವಲಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಕ್ಲಬ್‌ನ ಕಾರ್ಯದರ್ಶಿ ಮುಕೇಶ್, ಖಜಾಂಚಿ ಎ.ರವಿಕುಮಾರ್, ಜಂಟಿ ಕಾರ್ಯದರ್ಶಿ ಅರುಂಧತಿ, ಉಪಾಧ್ಯಕ್ಷರಾದ ಜೆ.ಆರ್.ರಾಕೇಶ್, ಮುನಿರಾಮೇಗೌಡ, ಕೆ.ಆರ್.ರವಿಕಿರಣ್‌ , ಅಕ್ಷಯ ಲಿಯೋ ಕ್ಲಬ್ ಕಾರ್ಯದರ್ಶಿ ಆರ್.ಸಂಧ್ಯಾ ಮತ್ತಿತರರು ಪಾಲ್ಗೊಂಡಿದ್ದರು.