ದೊಡ್ಡಬಳ್ಳಾಪುರ: ಘಾಟಿ ಸುಬ್ರಮಣ್ಯ ಜಾನುವಾರು ಜಾತ್ರೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದೆ. ಮಾಘಮಾಸದಲ್ಲಿ ನಡೆಯುವ ಈ ಜಾನುವಾರು ಜಾತ್ರೆ ರೈತಾಪಿ ವರ್ಗಕ್ಕೆ ನೋಡಲೊಂದು ಹಬ್ಬ. ಸುಬ್ರಮಣ್ಯ ಸ್ವಾಮಿ ಬ್ರಹ್ಮ ರತೋತ್ಸವಕ್ಕೆ ಮುನ್ನ ನಡೆಯುವ ಈ ಜಾತ್ರೆಯಲ್ಲಿ ಮಾರಾಟಕ್ಕೆ ಬರುವ ಎತ್ತು. ಹೋರಿಗಳ ಸಂಖ್ಯೆ ಸಾವಿರಾರು. ಹಾಗಾಗಿ ಶತಮಾನಗಳಿಂದ ಘಾಟಿ ಜಾನುವಾರು ಜಾತ್ರೆ ಮಿಕ್ಕೆಲ್ಲ ಜಾತ್ರೆಗಳಿಗಿಂತ ಹೆಚ್ಚು ಮಹತ್ವವನ್ನು ಪಡೆದಿದೆ.
ಘಾಟಿಯ ಜಾನುವಾರು ಜಾತ್ರೆಯಲ್ಲಿ ಎತ್ತುಗಳನ್ನು ಕೊಳ್ಳುವ ಹಾಗೂ ಮಾರಾಟ ಮಾಡುವ ರೈತರ ಭರಾಟೆಯೇ ಹೆಚ್ಚು. ಅದರಲ್ಲೂ ಈ ಜಾನುವಾರು ಜಾತ್ರೆಯಲ್ಲಿ ಹಳ್ಳಿಕಾರ್, ಅಮೃತ್ ಮಹಲ್, ಮಲೆನಾಡು ಗಿಡ್ಡ ಸೇರಿದಂತೆ ದೇಸೀಯ ತಳಿಗಳ ಮಾರಾಟ ಪ್ರಮುಖ ವಿಶೇಷ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲದೆ ಹೊರ ಜಿಲ್ಲೆ. ಹೊರ ರಾಜ್ಯಗಳಾದ ತಮಿಳುನಾಡು, ಅಂದ್ರ,ತೆಲಂಗಾಣ, ಕೇರಳದ ರೈತರು ಇಲ್ಲಿಗೆ ಬಂದು ಜಾನುವಾರುಗಳನ್ನು ಖರೀದಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಹಳೆ ಮೈಸೂರು ಭಾಗದ ಎತ್ತುಗಳು ಕೃಷಿಗೆ ಯೋಗ್ಯವೆಂಬ ನಂಬಿಕೆ ಕೊಳ್ಳಲು ಬರುವ ರೈತರದ್ದು. ಮಾರಾಟಕ್ಕೆ ಎತ್ತುಗಳನ್ನು ತಂದ ರೈತರು ಕಲ್ಯಾಣ ಮಂಟಪದ ರೀತಿ ಸಿಂಗರಿಸಿದ ಪೆಂಡಾಲ್ಗಳು, ಜಾನುವಾರುಗಳು ಮಲಗಲು ಹುಲ್ಲಿನ ಮೆತ್ತನೆಯ ಹಾಸು, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮುಂತಾದವ್ಯವಸ್ಥೆ ಕೊಳ್ಳಲು ಬರುವ, ಹಾಗೂ ದಲ್ಲಾಳಿಗಳ ಗಮನ ಸೆಳೆಯುತ್ತಿದೆ. ಹಾಲುಗಲ್ಲಿನಿಂದ ಹಿಡಿದು ಆರು ಹಲ್ಲಿನ ಎತ್ತುಗಳು ಇಲ್ಲಿ ಮಾರಾಟಕ್ಕೆ ಬಂದಿವೆ. ಒಂದು ಜೊತೆ ಎತ್ತು ಕೊಂಡರೆ ಒಂದು ಟಗರು ಉಚಿತ ಎಂಬ ಘೋಷವಾಕ್ಯ ಅಲ್ಲಲ್ಲಿ ಕಾಣುತ್ತಿದೆ.
ಜಾತ್ರೆಗೆ ಎತ್ತುಗಳಲನ್ನು ಮಾರಾಟಕ್ಕೆ ತಂದಿರುವ ರೈತ ಮಸಾಲ್ತಿ ಸುರೇಶ ಹೇಳುವಂತೆ, ನಾವು ಮೂರೂ ತಲೆಮಾರಿನಿಂದ ಸುಬ್ರಾಯನ ಘಾಟಿಗೆ ಎತ್ತುಗಳನ್ನು ಹೊಡೆಯುತ್ತಿದ್ದೇವೆ. ಉತ್ತಮ ಬೆಲೆಗೆ ಮಾರಾಟ ಮಾಡಿದ್ದೇವೆ. ನಮ್ಮ ತಾತನ ಕಾಲದಲ್ಲಿ ಒಂದು ಜೊತೆ ಎತ್ತುಗಳ ಬೆಲೆ ನೂರುಗಳು. ನಮ್ಮ ತಂದೆ ಕಾಲದಲ್ಲಿ ಸಾವಿರಗಳು. ಈಗ ನಾವು ಲಕ್ಷಗಳಿಗೆ ಮಾರಾಟ ಮಾಡಿದ್ದೇವೆ. ಹಳ್ಳಿಕಾರ್ ತಳಿ ಎತ್ತುಗಳನ್ನು ಕೊಳ್ಳುವವರು ಹೆಚ್ಚು ಇಷ್ಟ ಪಡುತ್ತಾರೆ. ಈ ಸಲ ಇಪ್ಪತ್ತು ಲಕ್ಷಕ್ಕೂ ಅಧಿಕವಾಗಿ ಒಂದು ಜೊತೆ ಮಾರಾಟವಾಗಿದೆ. ಇದು ಈ ಜಾತ್ರೆ ಯ ಇತಿಹಾಸದಲ್ಲಿ ದಾಖಲೆಯ ಬೆಲೆಯಾಗಿದೆ. ತಮಿಳುನಾಡು, ಅಂದ್ರ, ಕೇರಳಮತ್ತು ಉತ್ತರ ಕರ್ನಾಟಕದ ಗದಗ, ಹಾವೇರಿ, ಬಳ್ಳಾರಿ, ಧಾರವಾಡದ ರೈತರು ಈ ಬಾರಿ ಹೆಚ್ಚು ವ್ಯಾಪಾರ ಮಾಡಿದ್ದಾರೆ ಎಂದು ಹೇಳುತ್ತಾರೆ.
ವರ್ಷದಿಂದ ವರ್ಷಕ್ಕೆ ಹೆಚ್ಚಿನ ವಿಶೇಷತೆಗಳನ್ನು ಪಡೆದುಕೊಳ್ಳುತ್ತಿರುವ ಘಾಟಿಯ ಜಾನುವಾರು ಜಾತ್ರೆ ಕಳೆದ ಮೂರೂ ವರ್ಷಗಳಿಂದ ಕರೋನ, ದನಗಳ ಗಂಟು ರೋಗದಿಂದಾಗಿ ನಿಂತು ಹೋಗಿತ್ತು. ನೂರಾರು ಹೊರಗಿನ ರೈತರು ಬಂದು ಎತ್ತುಗಳು ಸಿಗದೇ ನಿರಾಸೆಯಿಂದ ವಾಪಸು ಹೋಗಿದ್ದರು. ಆದರೆ ಈ ಬಾರಿ ಉತ್ತಮ ವ್ಯಾಪಾರವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಹತ್ತು ಹದಿನೈದು ದಿನಗಳು ಇರುತ್ತಿದ್ದ ಜಾತ್ರೆ ಈ ಬಾರಿ ಅರೇಳು ದಿನಗಳಿಗೆಲ್ಲ ಬಂದ ಎತ್ತುಗಳು ಮಾರಾಟವಾಗಿ ಘಾಟಿ ದನಗಳಿಲ್ಲದೆ ಬಣ ಗುಡುತ್ತಿದೆ. ಈ ವರ್ಷ ವಿಶೇಷವಾಗಿ ಮಾರಾಟಕ್ಕೆ ಬಂದಿರುವ ಎತ್ತುಗಳಿಗೆ ನೀರು, ಸಂಘಟನೆಗಳಿಂದ ಉಚಿತ ಮೇವು, ರೈತರಿಗೆ ಅನ್ನ ದಾಸೋಹ ಪಶು ಆಸ್ಪತ್ರೆ ಸೇರಿದಂತೆ ಹಲವು ಉತ್ತಮ ವ್ಯವಸ್ಥೆ, ಜಿಲ್ಲಾಡಳಿತ ದೇವಸ್ಥಾನದ ಆಡಳಿತ ಮಂಡಳಿ ಮಾಡಿದ್ದು ರೈತರ ಸಂತಸಕ್ಕೆ ಕಾರಣವಾಗಿತ್ತು. ಒಟ್ಟಾರೆ ಈ ಬಾರಿಯ ಘಾಟಿ ದನಗಳ ಜಾತ್ರೆ ಹತ್ತು ಹಲವು ವಿಶೇಷತೆಗಳೊಂದಿಗೆ ರೈತರ, ಭಕ್ತಾದಿಗಳ, ನೋಡುಗರ ಗಮನ ಸೆಳೆದಿತ್ತು.