ಆಂಗ್ಲ ಭಾಷಾ ನಾಮ ಫಲಕ ತೆರವಿಗೆ ಆಂದೋಲನ_ನಂಜಪ್ಪ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಆಂಗ್ಲ ನಾಮ ಪಲಕಗಳೆ ರಾರಾಜಿಸುತ್ತಿವೆ.ಅದರಲ್ಲು ವಾಣಿಜ್ಯ ಮಳಿಗೆಗಳು ಹಾಗೂ ಕಾರ್ಖಾನೆಗಳ ನಾಮ ಪಲಕಗಳಲ್ಲಿ ಕನ್ನಡವೇ ಕಾಣುತ್ತಿಲ್ಲ.ರಾಜ್ಯದ ಎಲ್ಲಾ ನಾಮಪಲಕಗಳಲ್ಲಿ ಕನ್ನಡವೆ ಪ್ರದಾನವಾಗಿರಬೇಕು ಎಂದು ರಾಜ್ಯ ಸರ್ಕಾರದ ಆದೇಶವೇ ಇದೆ.ಆದರೆ ಅಂಗಡಿ ಮುಂಗಟ್ಟುಗಳ ಮಾಲಿಕರು ರಾಜ್ಯ ಸರ್ಕಾರದ ಆದೇಶವನ್ನು ಕಡೆಗಣಿಸಿ ಆಂಗ್ಲ ಭಾಷೆಯ ನಾಮಪಲಕಗಳನ್ನು ಹಾಕಿ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ.ಇದನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪರಬಾಷಾ ನಾಮಪಲಕಗಳಿಗೆ ಮಸಿ ಬಳಿಯುವ ಅಥವ ತೆರವುಗೊಳಿಸುವ ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಒಕ್ಕೂಟದ ಜಿಲ್ಲಾದ್ಯಕ್ಷ ಎ.ನಂಜಪ್ಪ ಹೇಳಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಂಜಪ್ಪ ಮಾತನಾಡಿ ವಾಣಿಜ್ಯೊದ್ಯಮಗಳ ನಾಮ ಪಲಕಗಳಲ್ಲಿ ಶೇ 65ರಷ್ಟು ಕನ್ನಡ ಬಾಷೆ ಇರಬೇಕು ಎಂದು ಸರ್ಕಾರದ ಸುತ್ತೋಲೆ ಇದೆ. ಆದರೆ ವಾಣಿಜ್ಯ ಮಳಿಗೆಗಳ ಮಾಲಿಕರು ಆಂಗ್ಲ ನಾಮ ಪಲಕಗಳನ್ನು ಹಾಕಿರುವುದು ಖಂಡನೀಯ‌.ಇದರ ಬಗ್ಗೆ ಈಗಾಗಲೆ ತಾಲ್ಲೂಕು ಆಡಳಿತ ಹಾಗು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ.ಹೀಗಾಗಿ ತಾಲ್ಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳಿಗೆ ಆಂಗ್ಲ ಬಾಷೆ ನಾಮ ಪಲಕಗಳನ್ನು ತೆರವುಗೊಳಿಸಲು ಒಂದು ತಿಂಗಳ ಕಾಲ ಗಡುವನ್ನು ಕೊಡುತ್ತೇವೆ. ಕ್ರಮ ಕೈಗೊಳ್ಳದಿದ್ದರೆ ಆಂಗ್ಲ ಭಾಷೆಯ ನಾಮ ಪಲಕಗಳಿಗೆ ಮಸಿ ಬಳಿಯುವ ಹೋರಾಟವನ್ನು ಮಾಡುತ್ತೇವೆ.ಜೊತೆಗೆ ಈ ಮೂಲಕ ಕಾರ್ಖಾನೆ ಮಾಲಿಕರಿಗೆ ಹಾಗೂ ವಾಣಿಜ್ಯ ಮಳಿಗೆಗಳ ಮಾಲಿಕರಿಗು ಎಚ್ಚರಿಕೆ ಕೊಡುತ್ತಿದ್ದೇವೆ.ಇದನ್ನು ಅವರು ಕಡೆಗಣಿಸಿದರೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಿ ಕನ್ನಡವನ್ನು ಉಳಿಸುವ ಕೆಲಸ ಮಾಡುತ್ತೇವೆ.ಇದಕ್ಕಿಂತ ಮುಖ್ಯವಾಗಿ ನಗರಸಭೆವತಿಯಿಂದ ವಾಣಿಜ್ಯ ಮಳಿಗೆಗಳಿಗೆ ಅನುಮತಿ ಕೊಡುವಾಗ ಸರ್ಕಾರದ ಸುತ್ತೋಲೆಯನ್ನು ಗಮನಿಸಬೇಕಾಗುತ್ತದೆ.ಆದರೆ ನಗರಸಭೆ ಅಧಿಕಾರಿಗಳು ಈ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.ಇದನ್ನು ಸಹಿಸಲು ಸಾದ್ಯವಿಲ್ಲ. ಮುಂದಿನ ದಿನಗಳಲ್ಲಿ ಕನ್ನಡದ ಬಾಷೆಯ ಬಗ್ಗೆ ಅಸಡ್ಡೆ ತೋರುವ ಯಾರಾದರೂ ಸರಿ ಅವರಿಗೆ ನಮ್ಮ ಸಂಘಟನೆವತಿಯಿಂದ ತಕ್ಕ ಉತ್ತರ ನೀಡುತ್ತೇವೆ.ಇದಕ್ಕಾಗಿ ಯಾವುದೇ ಬೆಲೆಯನ್ನು ತೆರಲು ನಾವು ಸಿದ್ದರಿದ್ದೇವೆ ಎಂದು ನಂಜಪ್ಪ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ತೆರಿದಾಳ್ ಶ್ರೀನಿವಾಸ್,ಜಿಲ್ಲಾ ಸಂಚಾಲಕ ಹೆಚ್ ಎಸ್.ವೆಂಕಟೇಶ್,ತಾಲ್ಲೂಕು ಅಧ್ಯಕ್ಷ ನಾಗರಾಜ್ ಕ.ಸಾ.ಪ ತಾಲ್ಲೂಕು ಮಾಜಿ ಅದ್ಯಕ್ಷರಾದ ಪ್ರಮೀಳಾ ಮಹದೇವ್ ವೇದಿಕೆ ಮುಖಂಡರಾದ ನಯಾಜ್ ಖಾನ್,ಅಹಮದ್ ಪಚೌಡಿವಾಲ,ಹರಿಕುಮಾರ್,ದರ್ಶನ್, ಕೆಂಪೇಗೌಡ ಮುಂತಾದವರು ಬಾಗವಹಿಸಿದ್ದರು.