ದೊಡ್ಡಬಳ್ಳಾಪುರ: ಕೆಳ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ತೀರ್ಪು ನೀಡುತ್ತಿರುವ ಕ್ರಮ ಅತ್ಯಂತ ಶ್ಲಾಘನೀಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ರಘುನಾಥ್ ಹೇಳಿದರು.
ನಗರದ ಕೋರ್ಟ್ ಆವರಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ೬೪ನೇ ಕನ್ನಡ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದರೂ ಕನ್ನಡಕ್ಕಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ವಿಚಾರ. ಎಲ್ಲ ರಂಗಗಳಲ್ಲಿ ಕನ್ನಡ ಉಳಿಸುವ ಪ್ರಯತ್ನ ಇಂದು ಅಗತ್ಯವಾಗಿದೆ ಎಂದು ಹೇಳಿದರು.
ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ವಾದಿಸಿದರೆ ಕೀಳು, ಆಂಗ್ಲ ಭಾಷೆಯಲ್ಲಿ ವಾದಿಸಿದರೆ ಮೇಲು ಎಂಬ ಮನೋಭಾವವನ್ನು ಹಿರಿಯ-ಕಿರಿಯ ವಕೀಲರು ಬಿಡಬೇಕು. ಮಾತೃಭಾಷೆಯಲ್ಲೇ ವಾದ ಮಂಡನೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ತೀರ್ಪು ಬರೆಯುವ ನ್ಯಾಯಾಧೀಶರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ವಿಶೇಷ ಪಾರಿತೋಷಕ ನೀಡುತ್ತಾ ಗೌರವಿಸುತ್ತಿದೆ. ಸುಪ್ರೀಂ ಕೋರ್ಟಿನ ಇ-ಕೋರ್ಟ್ ಸರ್ವಿಸ್ ನಲ್ಲೂ ತೀರ್ಪುಗಳನ್ನು ಕನ್ನಡಕ್ಕೆ ಅನುವಾದಿಸುವ ಸೌಲಭ್ಯವಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ದೊಡ್ಡಬಳ್ಳಾಪುರ ನ್ಯಾಯಾಲಯ ಸುಸಜ್ಜಿತವಾಗಿದೆ. ವಕೀಲರ ಸಂಘಕ್ಕೆ ಹೊಸ ಕಟ್ಟಡದ ಅಗತ್ಯವಿದ್ದು, ಶೀಘ್ರವೇ ಹೊಸ ಕಟ್ಟಡ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಇದಲ್ಲದೇ ವಕೀಲರ ಸಂಘ ಮುಂದಿಟ್ಟಿರುವ ಹಲವಾರು ಬೇಡಿಕೆಗಳ ಕುರಿತು ಹೈಕೋರ್ಟ್ ಗಮನಕ್ಕೆ ತಂದು ಇತ್ಯರ್ಥ ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲ ಪ್ರಭಾಕರ್ ರಾಜು ಅವರ ಕವನ ಸಂಕಲನ ಜನ್ಮದಾತೆ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದುರುಗಪ್ಪ ಏಕಬೋಟೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಸಾಯಿಬಣ್ಣ ಹಾಗರಿಗಿ, 1 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಬಿ.ಶಿಲ್ಪಾ, 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಕುಮಾರಿ ಸುಷ್ಮಾ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ, ಕರ್ನಾಟಕ ವಕೀಲರ ಪರಿಷತ್ ಸದಸ್ಯ ಶಿವಕುಮಾರ್ ಎನ್, ಬೆಂಗಳೂರು ವಕೀಲರ ಸಂಘದ ಖಜಾಂಚಿ ಎಂ.ಟಿ.ಹರೀಶ್, ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಬಿ.ಎನ್.ಕೃಷ್ಣಪ್ಪ, ಕಸಪಾ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ವಕೀಲರ ಸಂಘದ ಪ್ರ. ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಉಪಾಧ್ಯಕ್ಷ ಎಮ್ ಆರ್.ಸುರೇಶ್, ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ಸಿ.ವಿಜಯಕುಮಾರ್, ಖಜಾಂಚಿ ಮುನಿರಾಜು. ಎಮ್, ನಿರ್ದೆಶಕರಾದ ಅನಿತ ಎನ್ ಚಂದ್ರಶೇಖರ್, ಚಂದೇಶ್ ಕುಮಾರ್, ಪ್ರವೀಣ್ ಕುಮಾರ್ ಗುಪ್ತ, ಸೈಯದ್ ನಾಜೀಮುಲ್ಲ, ಲೀಲಾವತಿ, ಎನ್,ಶಿವಕುಮಾರ್, ಮಹಮ್ಮದ್ ಮುಮ್ತಾಜ್, ಉಮೇಶ್,ಮೋಹನ್ ಕುಮಾರ್, ಪ್ರಭಾಕರ್, ವಕೀಲರಾದ ಎಲ್.ಸಂಜೀವಪ್ಪ, ದಯಾನಂದಗೌಡ, ಸೇರಿದಂತೆ ವಕೀಲರ ಸಂಘದ ಸದಸ್ಯರು ಮತ್ತು ತಾಲ್ಲೂಕಿನ ಎಲ್ಲಾ ವಕೀಲರು ಭಾಗವಹಿಸಿದ್ದರು.