ಕೈಗಾರಿಕೆಗಳ ಅಭಿವೃದ್ಧಿ ನಿರುದ್ಯೋಗಿಗಳಿಗೆ ಜೀವನ : ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರ ಪಾಲಿಗೆ ಅಭಿವೃದ್ಧಿಯ ಆಶಾಕಿರಣವಾಗಿ ಪರಿಣಮಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು
ನಗರದ ಕರಿನಂಜನಪುರದ ರಸ್ತೆಯಲ್ಲಿರುವ ನಿಜಗುಣ ರೆಸಾರ್ಟ್‍ನಲ್ಲಿಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಿಡ್ಬಿ ಹಾಗೂ ಕಾಸಿಯಾ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು, ಹಣಕಾಸಿನ ನೆರವು ಮತ್ತು ರಫ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಶೇ.52ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 25 ಎಕರೆ ಭೂಮಿ ಗುರುತಿಸಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಸಾಕಷ್ಟು ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾ ವರ್ಗದ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸಣ್ಣ ಪ್ರಮಾಣದ ಕೈಗಾರಿಕಾ ನಿವೇಶನಗಳನ್ನು ಒದಗಿಸಲಾಗಿದೆ. ಪ್ರಸ್ತುತ 140 ಎಕರೆ ವಿಸ್ತೀರ್ಣದ ಪ್ರದೇಶವನ್ನು ಈಗಾಗಲೇ ಕೈಗಾರಿಕೆಗಳ ನಿರ್ಮಾಣಕ್ಕಾಗಿ ಹಂಚಿಕೆ ಮಾಡಲಾಗಿದೆ. ಈ ಪೈಕಿ 93 ಎಕರೆಯ ವಿವಿಧ ನಿವೇಶನಗಳನ್ನು ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಮಂಜೂರು ಮಾಡಲಾಗಿದ್ದು, ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ ಎಂದರು.
ಜಿಲ್ಲೆಯಲ್ಲಿ ಉದ್ಯಮ ನೊಂದಣಿ ಪ್ರಕ್ರಿಯೆಯಡಿ ನೊಂದಣಿಯಾಗಿರುವ ಅತಿಸಣ್ಣ ಹಾಗೂ ಸಣ್ಣ ಕೈಗಾರಿಕೆಗಳ 18,697 ಘಟಕಗಳಿದ್ದು, 99,254 ಉದ್ಯೋಗ ಸೃಷ್ಠಿಯಾಗಿದೆ. ಮಧ್ಯಮ ಕೈಗಾರಿಕೆಗೆ ಸಂಬಂಧಿಸಿದಂತೆ 4 ಘಟಕಗಳಿಗೆ 116 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, 155 ಉದ್ಯೋಗ ಸೃಷ್ಠಿಯಾಗಿದೆ. ಅಲ್ಲದೆ 6 ಬೃಹತ್ ಕೈಗಾರಿಕೆಗಳು 1,893 ಕೋಟಿ ಬಂಡವಾಳ ಹೂಡಿದ್ದು, ಇದರಿಂದ 2,487 ಉದ್ಯೋಗ ಸೃಷ್ಠಿಯಾಗಿರುತ್ತದೆ. ಇವೆಲ್ಲವೂ ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಆಶಾದಾಯಕವಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿಯವರ ಉದ್ಯೋಗ ಸೃಜನೆ ಯೋಜನೆಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಖಾದಿ ಗ್ರಾಮೋದ್ಯೋಗ ಆಯೋಗ, ರಾಜ್ಯ ಖಾದಿ ಮತ್ತು ಗ್ರಾಮದ್ಯೋಗ ಮಂಡಳಿ ಸಹಯೋಗದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರು, ಕುಶಲಕರ್ಮಿಗಳು ಹಾಗೂ ಉದ್ದಿಮೆದಾರರಿಗೆ ಬ್ಯಾಂಕ್ ಮೂಲಕ ಹಣಕಾಸಿನ ನೆರವು ಒದಗಿಸಿ ಉದ್ಯೋಗ ಸೃಷ್ಠಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಒಟ್ಟಿನಲ್ಲಿ ನಿರುದ್ಯೋಗಿಗಳಿಗೆ, ಸ್ಥಳೀಯರಿಗೆ ಉದ್ಯೋಗ ನೀಡುವ ಸಾಮಾಜಿಕ ಜವಾಬ್ದಾರಿ ಉದ್ದಿಮೆದಾರರಿಗೆ ಇರಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಸಿಯಾ ಸಂಸ್ಥೆಯ ಸಿ.ಎ. ಶಶಿಧರ ಶೆಟ್ಟಿ ಅವರು ಮಾತನಾಡಿ ಸರ್ಕಾರದ ವಿವಿಧ ಪ್ರೋತ್ಸಾಹ ಸಬ್ಸಿಡಿ ಯೋಜನೆಗಳು, ಸಿಡ್ಬಿ, ಜೆಡ್‍ಇಡಿ ಪ್ರಮಾಣೀಕರಣ, ಉದ್ಯಮ್ ನೊಂದಣಿ ಸಹಾಯ ವೇದಿಕೆ, ಡಿಜಿಟಲ್ ಉಪಕ್ರಮಗಳು, ಟ್ರೆಡ್ಸ್ ಪ್ಲಾಟ್‍ಫಾರ್ಮ್, ರಫ್ತು ಉತ್ತೇಜನಾ ಕಾರ್ಯಕ್ರಮಗಳ ಕುರಿತು ಆಸಕ್ತ ಯುವ ಉದ್ಯಮಿಗಳಿಗೆ ಈಗಾಗಲೇ ಅರಿವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜಿಲ್ಲೆಯಲ್ಲಿಯೂ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ ಕೈಗಾರಿಕೋದ್ಯಮಿಗಳು ಈ ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಚ್ಚಿನ ಅರಿವನ್ನು ಹೊಂದಬೇಕೆನ್ನುವುದು ಇದರ ಸದುದ್ದೇಶವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಾಮರಾಜನಗರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಎ. ಜಯಸಿಂಹ ಅವರು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು, ಹಣಕಾಸಿನ ನೆರವು ಮತ್ತು ರಫ್ತು ಕುರಿತು ಅರಿವಿನ ಪ್ರಾಮುಖ್ಯತೆಯನ್ನು ವಿವರಿಸಿದರು.
ಮೈಸೂರಿನ ಸಿಡ್ಬಿ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ನಿದೇಶಕರಾದ ವಿಶ್ವನಾಥ್, ವಿ.ಟಿ.ಪಿ.ಸಿ ಉಪನಿರ್ದೇಶಕರಾದ ಮನ್ಸೂರ್, ಕಾಸಿಯಾ ಉಪಾಧ್ಯಕ್ಷರಾದ ಎಂ.ಜಿ. ರಾಜಗೋಪಾಲ್, ಗೌರವ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜು, ನಗರ ಜಂಟಿ ಕಾರ್ಯದರ್ಶಿ ಶ್ರೇಯಾನ್ಸ್‍ಕುಮಾರ್ ಜೈನ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಎನ್. ಅರುಣ್ ಪಡಿಯಾರ್, ಖಜಾಂಚಿ ಮಲ್ಲೇಶ್ ಗೌಡ, ಚಾಮರಾಜನಗರ ಜಿಲ್ಲಾಭಿವೃದ್ಧಿಯ ಕಾಸಿಯಾ ಉಪ ಸಮಿತಿ ಅಧ್ಯಕ್ಷರಾದ ನ, ಸಹ ಕಾರ್ಯದರ್ಶಿ ರಂಜಿತ್, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ನಂಜುಂಡಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಚಾಮರಾಜನಗರ