ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡಿಕ್ರಾಸ್‌ಗೆ ತೆರಳುವ ರಸ್ತೆಯ ಮಾರ್ಗ ಮದ್ಯದಲ್ಲಿ ರಸ್ತೆ ಬದಿಯ ಮರವೊಂದು ಚಲಿಸುತ್ತಿದ್ದ ಆಟೋ ಮೇಲೆ ಮುರಿದು ಬಿದ್ದಿದೆ.ಇಂದು ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಘಟನೆ ನಡೆದಿದೆ.

ಆಟೋ ಚಾಲಕ ಪಿಂಡಕೂರು ತಿಮ್ಮನಹಳ್ಳಿ ನಿವಾಸಿ ಅಖಿಲೇಶ್ (27) ಅವರು ಅಂಬೇಡ್ಕರ್ ವೃತ್ತದಿಂದ ಡಿಕ್ರಾಸ್ ಕಡೆಗೆ ತೆರಳಿತ್ತಿದ್ದ ವೇಳೆ ರಸ್ತೆ ಬದಿಯ ಬೆಸ್ಕಾಂಗೆ ಸೇರಿದ ಕಾಂಪೌಂಡ್ ಒಳಗಿನ ಮರವೊಂದು ಮುರಿದು ಆಟೋ ಮೇಲೆ ಬಿದ್ದಿದೆ.

ಮರ ಬಿದ್ದ ರಭಸಕ್ಕೆ ಆಟೋ ಗಾಜು ಪುಡಿಯಾಗಿದ್ದು ಆಟೋ ಮುಂಭಾಗ ಜಖಂಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಆಗಬಹುದಾದ ಅನಾಹುತ ತಪ್ಪಿದೆ. ಈ ವೇಳೆ ಆಟೋ ಒಳಗೆ ಚಾಲಕನನ್ನು ಹೊರತು ಪಡಿಸಿ ಪ್ರಯಾಣಿಕರು ಯಾರು ಇರಲಿಲ್ಲ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿದ ನಗರ ಠಾಣೆಯ ಇನ್ಸ್‌ಪೆಕ್ಟರ್ ಅಮರೇಶ್ ಗೌಡ.ಎ ಸಬ್ ಇನ್ಸ್‌ಪೆಕ್ಟರ್ ಸಿ.ಕೃಷ್ಣಪ್ಪ ಮತ್ತು ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.