ಬಿಆರ್ಟಿಯಲ್ಲಿ 69ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ
ಚಾಮರಾಜನಗರ, ಬಿಆರ್ ಟಿ ಹುಲಿ ಸಂರಕ್ಷಿತ ಅರಣ್ಯ ವಲಯ ಪ್ರದೇಶ ವ್ಯಾಪ್ತಿಯಿಂದ ಹಮ್ಮಿಕೊಂಡಿದ್ದ 69ನೇ ವನ್ಯಜೀವಿ ಸಪ್ತಾಹ ದಿನದ ಸಮಾರೋಪ ಸಮಾರಂಭ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ನಡೆಯಿತು.
ಆರೋಗ್ಯ ತಪಾಸಣೆ, ರಕ್ತದಾನದಂತಹ ವಿಭಿನ್ನ ಕಾರ್ಯಕ್ರಮಗಳ ಮೂಲಕ 69ನೇ ವನ್ಯಜೀವಿ ಸಪ್ತಾಹ ದಿನದ ಸಮಾರೋಪ ಸಮಾರಂಭವನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ಆರ್.ಟಿ ಹುಲಿ ಸಂರಕ್ಷಿತಾ ವಲಯ ಅರಣ್ಯಾಧಿಕಾರಿಯಾದ ದೀಪಾ ಜೆ ಕಂಟ್ರಾಕ್ಟರ್ ಮಾತನಾಡಿ ಚಾಮರಾಜನಗರ ಜಿಲ್ಲೆಯು ಹುಲಿ, ಆನೆ ಗಣತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ಕೇವಲ ಯಾವುದೇ ಒಬ್ಬರಿಂದ ಸಾಧ್ಯವಾಗದು ಇದು ಸ್ಥಳೀಯ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯಿಂದ ಸಾಧ್ಯವಾಗಿದೆ. ರೈತರು, ಗಿರಿಜನರು ಹಾಗೂ ಮಾಧ್ಯಮಮಿತ್ರರ ಸಂಪೂರ್ಣ ಬೆಂಬಲದಿಂದ ಉತ್ತಮ ಕಾರ್ಯಕ್ರಮಗಳ ನಡೆಸಲು ಸಾಧ್ಯವಾಗುತ್ತದೆ. 69ನೇ ವನ್ಯಜೀವಿ ಸಪ್ತಾಹ ದಿನವು ಸುಮಾರು 7 ದಿನಗಳಿಂದ ಜನರಿಗೆ ಅರಣ್ಯ ಹಾಗೂ ಜೀವ ವೈವಿಧ್ಯತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನೀಡಿ ಯಶಸ್ಸು ಕಂಡಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರು ಮಾತನಾಡಿ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ವನ್ಯಜೀವಿಗಳ ಮಹತ್ವವನ್ನು ತಿಳಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ವರ್ಷದ ವನ್ಯಜೀವಿ ಸಪ್ತಾಹ ದಿನವನ್ನು ಆಚರಿಸಿದೆ. ಈ ರೀತಿಯ ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಅರಣ್ಯ ಜೀವಸಂಕುಲಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಗಿರಿಜನ ಬಂಧುಗಳು ಹಾಗೂ ಕಾಡಂಚಿನ ಭಾಗದ ಜನರಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದಾಗ ಮಾತ್ರ ಕಾಡಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲೆ, ಮ್ಯಾರಾಥಾನ್, ಆನ್‍ಲೈನ್ ಕ್ವಿಜ್ , ಪೋಟೋಗ್ರಾಫಿ ವಿಜೇತರಿಗೆ ಬಹುಮಾನ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ನಂತರ ಗೊರುಕನ ನೃತ್ಯದ ಮೂಲಕ ಸ್ಥಳೀಯರು ಎಲ್ಲರ ಗಮನ ಸೆಳೆದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಇತರರು ಭಾಗವಹಿಸಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ.