ಹಣ ಲಪಟಾಯಿಸಲು ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ: ಎಂ.ಸಿ. ಚಂದ್ರಶೇಖರ್

ದೊಡ್ಡಬಳ್ಳಾಪುರ: ಜಮೀನು ಖರೀದಿಗಾಗಿ ಅಂಜಿನಪ್ಪ ಅವರಿಗೆ ಮಾಡಿಕೊಟ್ಟಿದ್ದ ರಿಜಿಸ್ಟರ್ ಕರಾರು ಪತ್ರಕ್ಕೆ ಸಂಬಂಧಿಸಿದಂತೆ ಆಂಜಿನಪ್ಪ ಹಾಗೂ ಅವರ ಪುತ್ರ ಲೋಕೇಶ್ ಅವರುಗಳು ನನಗೆ ಹಣ ನೀಡದೆ ವಂಚಿಸುವ ಸಲುವಾಗಿ , ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕರು, ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳ ಜೊತೆಗೆ ಶಾಮೀಲಾಗಿ ಚೆಕ್ ತಿದ್ದಲಾಗಿದೆ ಎಂದು ಆರೋಪಿಸಿ ಸುಳ್ಳು ದೂರು ದಾಖಲಿಸಿ ನನ್ನನ್ನು ಜೈಲಿಗೆ ಹೋಗುವಂತೆ ಮಾಡಿದ್ದಾರೆ ಎಂದು ಎಂ.ಸಿ.ಚಂದ್ರಶೇಖರ್ ಆರೋಪಿಸಿದರು.

ನನ್ನ ಮೇಲೆ ದಾಖಲಿಸಿರುವ ಸುಳ್ಳು ದೂರಿಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಮತ್ತು ಯಲಹಂಕ ಶಾಖೆಯ ಬ್ಯಾಂಕ್ ಆಫ್ ಬರೋಡಾದ ಇಬ್ಬರು ವ್ಯವಸ್ಥಾಪಕರು ಸೇರಿ ನಾಲ್ವರ ವಿರುದ್ಧ ನಗರ ಪೊಲೀಸ್ .ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಶುಕ್ರವಾರ ದೊಡ್ಡಬಳ್ಳಾಪುರದ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲನೆಯದಾಗಿ ನಾನು ಮದ್ಯವರ್ತಿಯಲ್ಲ, ವ್ಯವಹಾರ ಮಾಡಿರುವ ಭೂಮಿಯಲ್ಲಿ ನಾನೂ ಒಬ್ಬ ಪಾಲುದಾರ, ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ನನಗೆ ಚೆಕ್ ಮೂಲಕ ನೀಡಲಾದ ಹಣ ಲಪಟಾಯಿಸಲು ಆಂಜಿನಪ್ಪ ಸುಳ್ಳು ದೂರು ನೀಡಿದ್ದಾರೆ. ಪೊಲೀಸರು ನನಗೆ ನೋಟೀಸ್ ನೀಡದೆ, ಯಾವುದೇ ರೀತಿಯ ತನಿಖೆ ನಡೆಸದೆ ದೂರು ದಾಖಲಿಸಿ ಅವಮಾನ ಮಾಡಿದ್ದಾರೆ. ಈ ಸಂಬಂಧ ಮಾನಷ್ಟ ಮೊಕದ್ದಮೆ ಹೂಡಲಾಗುವುದು’ ಎಂದರು.

ನನಗೆ ಚೆಕ್ ಕೊಟ್ಟು ಹಣ ನೀಡದೆ ವಂಚಿಸಿರುವ ಬಗ್ಗೆ ಈ ಹಿಂದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಂಜಿನಪ್ಪ ಮತ್ತು ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ನೀಡಲು ಹೋದಾಗ ‘ನಮ್ಮ ಠಾಣಾ ವ್ಯಾಪ್ತಿಗೆ ಬರುವುದಿಲ್ಲ. ನಗರ ಪೋಲೀಸ್ ಠಾಣೆಗೆ ದೂರು ನೀಡಿ ಎಂದು ದೂರು ಪಡೆಯಲು ನಿರಾಕರಿಸಿದ್ದರು. ಆದರೆ, ಇದೇ ಚೆಕ್‌ ವಿಷಯವಾಗಿ ಆಂಜಿನಪ್ಪ ನನ್ನ ವಿರುದ್ಧ ದೂರು ನೀಡಿದಾಗ ಮಾತ್ರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ನನ್ನ ಖಾತೆ ಮೂಲಕ ಹಣ ಡ್ರಾ ಮಾಡಿಕೊಳ್ಳಲು ಸಲ್ಲಿಸಲಾಗಿದ್ದ 65 ಲಕ್ಷ ಚೆಕ್ ಅನ್ನು ಬ್ಯಾಂಕ್‌ ವ್ಯವಸ್ಥಾಪಕರು ನನಗೆ ವಾಪಸ್ ನೀಡದೆ ಆಂಜಿನಪ್ಪ ಅವರಿಗೆ ಕೊಟ್ಟಿದ್ದಾರೆ. ಬ್ಯಾಂಕ್ ವಿರುದ್ಧ ಆರ್‌ಬಿಐಗೂ ದೂರು ನೀಡಲಾಗಿದೆ. ಅಂಜಿನಪ್ಪ ಅವರ ಮಗ ಲೋಕೇಶ್ ಹಾರ್ಡ್‌ವೇರ್ ವ್ಯಾಪಾರದ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಾರೆ ಆದರೆ, ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಐದು ಲಕ್ಷದ ಎರಡು ಖಾಲಿ ಚೆಕ್‌ ನೀಡಿದ್ದು, ಚಂದ್ರಶೇಖರ್ ಅವರು ಚೆಕ್‌ ನ್ನು ₹65 ಲಕ್ಷ ಎಂದು ಬರೆದುಕೊಂಡಿದ್ದಾರೆ, ಹೀಗಾಗಿ ಚೆಕ್ ತಿದ್ದಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಐದು ಲಕ್ಷದ ಎರಡು ಚೆಕ್ ಎಂದು ಬರೆದ ಮೇಲೆ ಅದು ಖಾಲಿ ಚೆಕ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ನಾನು ಬ್ಯಾಂಕಿಗೆ ಚೆಕ್ ಹಾಕಿದ್ದು ಏಪ್ರಿಲ್ 6 ರಂದು ಆದರೆ, ಬ್ಯಾಂಕ್ ಸಿಬ್ಬಂದಿ ಆಂಜಿನಪ್ಪ ಅವರಿಗೆ ಮೂರನೇ ತಾರೀಖಿನಂದೇ ಕರೆ ಮಾಡಿ ನಿಮ್ಮ ಚೆಕ್ ಬಂದಿದೆ ಎಂದು ತಿಳಿಸುತ್ತಾರೆ ಇದೆಲ್ಲಾ ವ್ಯವಸ್ಥಿತ ಸಂಚಾಗಿದೆ, ಆಂಜಿನಪ್ಪ ಮತ್ತು ಅವರ ಮಗನ ಆರೋಪಕ್ಕೆ ಆಧಾರವೇ ಇಲ್ಲದಾಗಿದೆ’ ಎಂದರು.

ಪತ್ರಿಕಾಗೊಷ್ಠಿ ಯಲ್ಲಿ ಮುಖಂಡರಾದ ಬಾಶೆಟ್ಟಿಹಳ್ಳಿ ಪ್ರೇಮ್ ಕುಮಾರ್ ಉಪಸ್ಥಿತರಿದ್ದರು.