ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದು ಯಾವಾಗ ಅಂತಾ ಕೇಳುತ್ತಿದ್ದವರಿಗೆ ಇಂದಿನಿಂದ ಗುಡ್‌ನ್ಯೂಸ್ ಸಿಗಲಿದೆ. ರಾಜ್ಯ ಸರ್ಕಾರ ತನ್ನ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಇಂದು ಸಂಜೆ ಚಾಲನೆ ನೀಡಲು ತಯಾರಿ ನಡೆಸಿದೆ. ಇನ್ನು ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಇದಕ್ಕಾಗಿ ನೀವು ಯಾವೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಎನ್ನುವ ಮಾಹಿತಿಯನ್ನು ಹಂಚಿಕೊಂಡಿದೆ.
ಹೌದು, ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. ಇಂದಿನಿಂದಲೇ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಸಿಗಲಿದ್ದು, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಸಂದೇಶದ ಆದಾರದ ಮೇಲೆ ನೀವು ಅರ್ಜಿ ಸಲ್ಲಿಸುವ ದಿನಾಂಕ ನಿರ್ಧಾರವಾಗಲಿದೆ. ಹಾಗಾದ್ರೆ ಒಂದು ವೇಳೆ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಯಾವುದೇ ಸಂದೇಶ ಬಂದಿಲ್ಲದಿದ್ದರೆ ನೀವು ಅರ್ಜಿ ಸಲ್ಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಗೆ ನೀವು ಏಕಾಏಕಿ ಹೋಗಿ ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಿಲ್ಲ. ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್‌ಗೆ ನೋಂದಣಿ ವೇಳಾಪಟ್ಟಿಯ ಸಂದೇಶ ಬರಲಿದೆ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಸಂದೇಶದಲ್ಲಿ ನೀವು ಅರ್ಜಿ ಸಲ್ಲಿಸಬೇಕಾದ ದಿನಾಂಕ, ನಿಮಗೆ ನಿಗದಿಪಡಿಸಿದ ಸ್ಥಳದ ಮಾಹಿತಿ ವಿವರ ಇರಲಿದೆ. ಈ ಸಂದೇಶದಲ್ಲಿ ನಿಮಗೆ ನಿಗದಿಪಡಿಸಿರುವ ದಿನಾಂಕದಂದು ಹೋಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ನೀವು ನಿಗದಿಪಡಿಸಿದ ದಿನಾಂಕದಂದು ಅರ್ಜಿ ಸಲ್ಲಿಸಲು ಸಾದ್ಯವಾಗದೇ ಹೋದರೆ ಪ್ರತಿ ದಿನ ಸಂಜೆ ಐದು ಗಂಟೆಯ ನಂತರ ಹೋಗಿ ನಿಗದಿಪಡಿಸಿದ ಸ್ಥಳದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ರೇಷನ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ ನಿಮ್ಮ ಬಳಿ ಇಲ್ಲದಿದ್ದರೆ ಏನು ಮಾಡೋದು?
ಅಯ್ಯೋ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು, ಆದರೆ ರೇಷನ್ ಕಾರ್ಡ್‌ಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ನಮ್ಮ ಬಳಿ ಇಲ್ಲ. ಹೇಗೆ ನಮ್ಮ ಅರ್ಜಿ ಸಲ್ಲಿಸುವ ದಿನಾಂಕ ತಿಳಿದುಕೊಳ್ಳುವುದು ಅನ್ನೊ ಚಿಂತೆಯಲ್ಲಿದ್ದೀರಾ. ಇದಕ್ಕೂ ಕೂಡ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ. ಅದೇನೆಂದರೆ ರಾಜ್ಯ ಸರ್ಕಾರ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ ತಿಳಿದುಕೊಳ್ಳಲು ನಂಬರ್ 8147500500 ಸಂಖ್ಯೆಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಸ್‌ಎಂಎಸ್ ಕಳುಹಿಸಲು ಅವಕಾಶ ಕಲ್ಪಿಸಿದೆ. ಈ ನಂಬರ್‌ಗೆ ನೀವು ಸಂದೇಶ ಕಳುಹಿಸಿದ ಎರಡು ಸೆಕೆಂಡುಗಳಲ್ಲಿಯೇ ನಿಮ್ಮ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ ಹಾಗೂ ಸ್ಥಳದ ವಿವರವನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ನಿಮ್ಮ ಆಧಾರ್ ಜೊತೆಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಬದಲಿಗೆ ನಿಮ್ಮದೆ ಬೇರೆ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾಯಿಸುವುದಕ್ಕೆ ಬಯಸಿದರೆ ನೀವು ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಅನ್ನು ತೆಗೆದುಕೊಂಡು ಹೋಗಬೆಕಾಗುತ್ತದೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಕಂಪ್ಯೂಟರ್ ಸೆಂಟರ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಇದಕ್ಕಾಗಿ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ನಿಮಗೆ ಅರ್ಜಿ ಸಲ್ಲಿಕೆ ಬಗ್ಗೆ ಯಾವುದೇ ಗೊಂದಲವಿದ್ದರೆ 1902 ನಂಬರ್‌ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ನೀವು ಬೇರೆ ಜಿಲ್ಲೆಯಲ್ಲಿದ್ದು? ನಿಮ್ಮ ರೇಷನ್ ಕಾರ್ಡ್ ವಿಳಾಸ ಅಪ್ಡೇಟ್ ಮಾಡಿಲ್ಲದಿದ್ದರೆ ಅರ್ಜಿ ಸಲ್ಲಿಸಬಹುದೇ?
ನೀವು ಯಾವುದೇ ಜಿಲ್ಲೆಯಲ್ಲಿ ವಾಸವಿದ್ದರೂ ಕೂಡ ನಿಮ್ಮ ರೇಷನ್ ಕಾರ್ಡ್ ವಿಳಾಸಕ್ಕೆ ಸಮೀಪವಿರುವ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಒಂದು ವೇಳೆ ನೀವಿರುವ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸಬೇಕು ಅಂದರೆ ಮೊದಲು ನಿಮ್ಮ ರೇಷನ್ ಕಾರ್ಡ್ ವಿಳಾಸವನ್ನು ಅಪ್ಡೇಟ್ ಮಾಡಿಸಿಕೊಂಡು ನಂತರ ಅರ್ಜಿ ಸಲ್ಲಿಸುವುದಕ್ಕೆ ಸಾದ್ಯವಾಗಲಿದೆ.