ದೊಡ್ಡಬಳ್ಳಾಪುರ. ಸರ್ಕಾರಿ ಜಮೀನನ್ನು ಕಬಳಿಸುತ್ತಿರುವವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣಕ್ಕೆ ಸಂಚು ಮಾಡಿ ಅಪಘಾತದ ನೆಪದಲ್ಲಿ ಸಾಮಾಜಿಕ ಕಾರ್ಯಕರ್ತ ರಾಮಾಂಜಿನಪ್ಪ ಅವರ ಕೊಲೆಗೆ ಯತ್ನಿಸಿರುವ ಭೂಗಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಜಾ ವಿಮೋಚನಾ ಸಮಿತಿ ರಾಜ್ಯಾ ಕಾರ್ಯಾಧ್ಯಕ್ಷ ಗೂಳ್ಯಹನುಮಣ್ಣ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕ‌ಓಬದೇನಹಳ್ಳಿ ನಿವಾಸಿ ರಾಮಾಂಜಿನಪ್ಪ ಅವರು ಬೈಕ್ ನಲ್ಲಿ ಹೋಗುವಾಗ ಹಾಡೋನಹಳ್ಳಿ ಮೂಲದ ಶರತ್‌ಕುಮಾರ್ ಎಂಬಾತ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಮೋಪರಹಳ್ಳಿ ಗ್ರಾಮದ ಬಳಿ ಕಾರನ್ನು ಬೈಕ್ ಗೆ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದಾನೆ. ಅಪಘಾತದ ಬಳಿಕ ಸ್ಥಳೀಯರು ಗಾಯಾಳು ರಾಮಾಂಜಿನಪ್ಪ ಅವರನ್ನು ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರೌಡಿಗಳನ್ನು ಕರೆಯಿಸಿ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ರಾಮಾಂಜಿನಪ್ಪ ಅವರೇ ಅಪಘಾತ ಮಾಡಿದ್ದಾನೆ ಎಂದು ವಿನಾಕಾರಣ ಗಲಾಟೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಗೆ ಬಂದು ಗಾಯಾಳುವಿಗೆ ಚಿಕಿತ್ಸೆ ನೀಡದಂತೆ ವೈದ್ಯರಿಗೂ ಬೇದರಿಕೆ ಹಾಕಿದ್ದಾರೆ. ಪೊಲೀಸರು ಆಸ್ಪತ್ರೆಗೆ ಬಂದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಆರೋಪಿಸಿದರು.

ಕೊಲೆ ಮಾಡುವ ಹುನ್ನಾರ:

ಸಾಮಾಜಿಕ ಕಾರ್ಯಕರ್ತ ರಾಮಾಂಜಿನಪ್ಪ ಮಾತನಾಡಿ ಕಾರು ಗುದ್ದಿದ ರಭಸಕ್ಕೆ ತೀವ್ರ ಪೆಟ್ಟಾಗಿದೆ. ಬೈಕ್ ಮೇಲೆ ಕಾರನ್ನು ಹತ್ತಿಸಿದ ಶರತ್ ಕುಮಾರ್ ಸುಮಾರು 20 ಮೀಟರ್‌ನಷ್ಟು ದೂರ ಎಳೆದೊಯ್ದಿದ್ದಾನೆ. ಉದ್ದೇಶಪೂರ್ವಕವಾಗಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತ ರಾಮಾಂಜಿನಪ್ಪ ಆರೋಪಿಸಿದರು.

ಕುಂದಾಣ ಹೋಬಳಿಯ ಚಿಕ್ಕಓಬದೇನಹಳ್ಳಿ ಗ್ರಾಮದ ಸರ್ಕಾರಿ ಗ್ರಾಮಠಾಣಾದ 8 ಎಕರೆ 4 ಗುಂಟೆ ಜಮೀನನ್ನು ಕಬಳಿಕೆ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಸರ್ಕಾರಕ್ಕೆ 20 ಕೋಟಿ ರೂ. ನಷ್ಟಮಾಡಿರುವ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಬೀರಪ್ಪನ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಲೋಕಾಯುಕ್ತದಲ್ಲಿ ಬೀರಪ್ಪ ಸೇರಿ ನಾಲ್ವರ ವಿರುದ್ಧ 10 ವರ್ಷದಿಂದ ವಿಚಾರಣೆ ನಡೆಯುತ್ತಿದೆ. ಇದೇ ದ್ವೇಷದಿಂದ ಬೀರಪ್ಪ ನನ್ನನ್ನು ಕೊಲೆ ಮಾಡಿಸಲು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದರು.

ಆರೋಪಿಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದೇನೆ. ನನಗೆ ಪ್ರಾಣ ಬೆದರಿಕೆ ಇರುವುದರಿಂದ ಸಂಬಂಧಪಟ್ಟವರು ನನಗೆ ಸೂಕ್ತ ಭದ್ರತೆ ನೀಡಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಚಿಕ್ಕೇಗೌಡ, ಡಿ.ಸಿ.ದೊಡ್ಡಚಿಕ್ಕಣ್ಣ, ವಡ್ಡರಹಳ್ಳಿ ರಾಜಶೇಖರ್, ಸಿಎಚ್.ಮುನಿರಾಜು ಉಪಸ್ಥಿತರಿದ್ದರು.