ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಬೋವಿ ಸಮಾಜದ ಬೃಹತ್ ಸಮಾವೇಶ: ರಾಮಕೃಷ್ಣ
ದೊಡ್ಡಬಳ್ಳಾಪುರ :ಜುಲೈ 18 ರಂದು ರಾಜ್ಯ ಮಟ್ಟದ ಬೋವಿ ಸಮಾಜದ ಬೃಹತ್ ಸಮಾವೇಶವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಂ.ಗ್ರಾಮಾಂತರ ಜಿಲ್ಲೆಯಿಂದ ಸುಮಾರು ಐದು ಸಾವಿರ ಜನ ಭಾಗವಹಿಸಲಿದ್ದೇವೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಭೋವಿ ಸಂಘದ ( ಓಡ್) ಅಧ್ಯಕ್ಷ ರಾಮಕೃಷ್ಣ ಅವರು ತಿಳಿಸಿದರು.
ನಗರದ ಬೆಂ.ಗ್ರಾ. ಜಿಲ್ಲಾ ಬೋವಿ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 18 ರಂದು ಚಿತ್ರದುರ್ಗದ ಗುರುಪೀಠದಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಹಾಲಿ ಶಾಸಕರು, ಬೋವಿ ಸಮಾಜದ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವು ಸಾಧಕರು ಮತ್ತು ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ನಮ್ಮ ಬೆಂ.ಗ್ರಾಮಾಂತರ ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೂಪುರೇಷಗಳನ್ನು ಸಿದ್ದಪಡಿಸಿಕೊಳ್ಳಲಾಗುತ್ತಿದೆ. ಈ ಬಾರಿಯ ಸಮಾವೇಶದಲ್ಲಿ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90 ರಷ್ಟು ಅಂಕ ಪಡೆದು ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು, ಇದೇ ಸಂದರ್ಭದಲ್ಲಿ ಜನಾಂಗದ ವದು-ವರರ ವೇದಿಕೆಯನ್ನೂ ಸಿದ್ದಪಡಿಸಲಾಗಿದೆ ಎಂದರು.
ಈ ಸಮಾವೇಶಕ್ಕೆ ಜಿಲ್ಲೆಯ ಬೋವಿ ಸಮಾಜದ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಮಾಜದ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ, ಹೊಸಕೋಟೆ ಬೋವಿ ಸಂಘದ ಅಧ್ಯಕ್ಷ ವೆಂಕಟೇಶ್, ದೇವನಹಳ್ಳಿ ಅಧ್ಯಕ್ಷ ಕೆ.ಸಿ ತಮ್ಮಯ್ಯ, ರಾಮಣ್ಣ, ಶ್ರೀನಿವಾಸ್, ಸೀನಪ್ಪ, ಉದಯ್ ಕುಮಾರ್, ಸುಗ್ರೀವಪ್ಪ ಮುಂತಾದವರು ಉಪಸ್ಥಿತರಿದ್ದರು.