ಬೆಂಗಳೂರು: ಶಕ್ತಿ ಯೋಜನೆಯ ( Shakti Scheme ) ನಂತರ ಆಟೋ, ಟ್ಯಾಕ್ಸಿಗಳಿಗೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಆಟೋ ಮತ್ತು ಟ್ಯಾಕ್ಸಿಗಳಿಗೆ ಜನರು ಇಲ್ಲದೇ ಚಾಲಕರು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವಂತ ಆಟೋ ಚಾಲಕರು, ಜುಲೈ.28ರಂದು ರಾಜ್ಯಾಧ್ಯಂತ ಆಟೋ ಚಾಲಕರ ( Auto Driver ) ಮುಷ್ಕರಕ್ಕೆ ಕರೆ ನೀಡಲಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಅವರು, ಶಕ್ತಿ ಯೋಜನೆ ನಂತ್ರ ಆಟೋ ಮತ್ತು ಟ್ಯಾಕ್ಸಿ ಚಾಲಕರು ನಷ್ಟ ಅನುಭವಿಸುವಂತೆ ಆಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಆಟೋ ಚಾಲಕನಿಗೆ ಪ್ರತಿ ತಿಂಗಳು 10 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದಿಂದ ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಆಟೋ, ಟ್ಯಾಕ್ಸಿ ಚಾಲಕರಿಗೆ 2 ಲಕ್ಷ ಸಾಲ ಸೌಲಭ್ಯ ನೀಡಬೇಕು. ಎಲೆಕ್ಟ್ರಿಕ್ ಆಟೋಗಳನ್ನು ರ್ಯಾಪಿಡೋ, ಓಲಾ, ಊಬರ್ ಕಂಪನಿಗೆ ನೋಂದಣಿ ಮಾಡುವುದನ್ನು ನಿಲ್ಲಿಸಬೇಕು ಎಂದರು.
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ.28ರಂದು 21 ಆಟೋ ಸಂಘಟನೆಗಳು ಹಾಗೂ ಖಾಸಗಿ ಬಸ್ ಒಕ್ಕೂಟ, ಶಾಲಾ ವಾಹನಗಳನ್ನು ಬಂದ್ ಮಾಡಿ ರಾಜ್ಯಾಧ್ಯಂತ ಅನಿರ್ದಿಷ್ಟಾವಧಿ ಮುಷ್ಕರ, ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ತಿಳಿಸಿದರು.