ಟೊಮೆಟೊ ತೋಟದ ರಕ್ಷಣೆಗಾಗಿ ಕಾವಲಿಗೆ ನಿಂತ ದಂಪತಿಗಳು..!
ದೊಡ್ಡಬಳ್ಳಾಪುರ:ರೈತರು ಹಗಲು ರಾತ್ರಿ ಕಷ್ಟಪಟ್ಟು ಬೆಳೆದಿದ್ದ ಟೊಮೊಟೊ ಬೆಳೆಯನ್ನ ರಾತ್ರಿ ವೇಳೆ ಕಳ್ಳರು ಕದ್ದಿರುವ ಘಟನೆ ನೆಡೆದಿದ್ದು, ಟೊಮೆಟೊ ರಕ್ಷಣೆಗಾಗಿ ರೈತ ದಂಪತಿಗಳು ಕಾವಲು ಕಾಯುತ್ತಿದ್ದಾರೆ.
ತಾಲ್ಲೂಕಿನ ತೂಬಗೆರೆ ಹೋಬಳಿ ಲಕ್ಷ್ಮೀದೇವಿಪುರ ಬಳಿಯ ಜಗದೀಶ್ ಮತ್ತು ಶಶಿಕಲಾ ದಂಪತಿಗಳ ತೋಟದಲ್ಲಿ ಕಳವು ನಡೆದಿದ್ದು, ದಂಪತಿಗಳು ತೋಟಕ್ಕೆ ಕಾವಲು ಕಾಯುತ್ತಿದ್ದಾರೆ.
ಮಳೆಗಾಲ ಆರಂಭವಾದ ಬೆನ್ನಲ್ಲೇ ಟೊಮೆಟೊ ಬೆಳೆಗೆ ಚಿನ್ನದ ಬೆಲೆ ಬಂದಿದೆ. ರೈತರು ಬೆವರು ಸುರಿಸಿ ಬೆಳೆದ ಟೊಮೆಟೊ ಮೇಲೆ ಈಗ ಕಳ್ಳರ ಕಣ್ಣು ಬಿದ್ದಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿಯ ಲಕ್ಷ್ಮೀದೇವಿಪುರ ಗ್ರಾಮದ ಜಗದೀಶ ಅವರು 3 ಲಕ್ಷ ವೆಚ್ಚದಲ್ಲಿ 1 ಎಕರೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ ₹100 ರ ಗಡಿ ದಾಟಿದ್ದು, ಉತ್ತಮವಾದ ಫಸಲು ಬಂದ ಕಾರಣಕ್ಕೆ ದಂಪತಿಗಳು ಖುಷಗೊಂಡಿದ್ದರು. ಆದರೆ, ಶನಿವಾರ ಹಾಗೂ ಭಾನುವಾರ ಕಿಡಿಗೇಡಿಗಳು ರಾತ್ರೋರಾತ್ರಿ ₹1.50 ಲಕ್ಷ ಮೌಲ್ಯದ 80 ಬಾಕ್ಸ್ ಟೊಮೆಟೊ ಕದ್ದು ಪರಾರಿಯಾಗಿದ್ದಾರೆ.
ಜಗದೀಶ ಅವರು ಇತ್ತೀಚೆಗಷ್ಟೇ ಹೊಸ ಕೊಳವೆಬಾವಿ ಕೊರೆಸಿದ್ದರು. ನೀರು ಸಿಗದ ಕಾರಣ ಮತ್ತೊಂದು ಕೊಳವೆಬಾವಿ ಕೊರೆಸಿ ಬೆಳೆ ಬೆಳೆಯಲು ಆರಂಭಿಸಿದ್ದರು. ಇದಕ್ಕೆಲ್ಲ ಒಟ್ಟು 12 ಲಕ್ಷ ಸಾಲ ಮಾಡಿದ್ದರು. ಟೊಮೆಟೊ ಬೆಳೆಗೆ ಉತ್ತಮವಾದ ಬೆಲೆ ಬಂದ ಹಿನ್ನೆಲೆಯಲ್ಲಿ ಸಾಲ ತೀರಿಸಿ ಲಾಭದ ನಿರೀಕ್ಷೆಯಲ್ಲಿ ಕುಟುಂಬವಿತ್ತು. ಆದರೆ, ಆ ರೈತಾಪಿ ಕುಟುಂಬದ ಆಸೆಗೆ ಕಿಡಿಗೇಡಿಗಳು ತಣ್ಣೀರೆರಚಿದ್ದಾರೆ.
ಕೂಲಿಯಾಳುಗಳ ಸಮಸ್ಯೆ ಮಧ್ಯೆಯೂ ಜಗದೀಶ್ ಹಾಗೂ ಅವರ ಪತ್ನಿ ಶಶಿಕಲಾ ಇಬ್ಬರೇ ಬೆಳೆ ನಿರ್ವಹಣೆ ಮಾಡುತ್ತಿದ್ದರು. ಗ್ರಾಮದಿಂದ ಒಂದೂವರೆ ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ತೋಟ ಇದ್ದ ಕಾರಣ ರಾತ್ರಿ ವೇಳೆ ತಂಗುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಹೊಂಚು ಹಾಕಿದ ಕಳ್ಳರು ಶನಿವಾರ ರಾತ್ರಿ ಸುಮಾರು 40 ಬಾಕ್ಸ್ ಟೊಮೆಟೊ ಕದ್ದಿದ್ದಾರೆ. ಭಾನುವಾರ ಬೆಳಿಗ್ಗೆ ಟೊಮೆಟೊ ಬಿಡಿಸಲೆಂದು ತೋಟಕ್ಕೆ ಬಂದಾಗ ಗಿಡಗಳನ್ನು ಮುರಿದು ಟೊಮೆಟೊ ಕಿತ್ತಿರುವುದು ಬೆಳಕಿಗೆ ಬಂದಿದೆ.
ರೈತ ಜಗದೀಶ್ ಮಾತನಾಡಿ ಮೊದಲ ಕೊಯ್ಲಿನಲ್ಲಿ 40 ಬಾಕ್ಸ್ ಸಂಗ್ರಹವಾಗಿತ್ತು. ಅದಾದ ಎರಡು ದಿನದ ಬಳಿಕ ಕನಿಷ್ಠ 80 ಬಾಕ್ಸ್ ಆಗುವ ನಿರೀಕ್ಷೆಯಿತ್ತು. ಆದರೆ, ಭಾನುವಾರ ಕೇವಲ 20 ಬಾಕ್ಸ್ ಸಂಗ್ರಹವಾಯಿತು. ಭಾನುವಾರ ರಾತ್ರಿ ಕೂಡ ಇದೇ ರೀತಿಯ ಕೈಚಳಕ ತೋರಿಸಿದ್ದು ಕಂಡು ಬಂದಿತು. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬೆಳೆ ಮೇಲೆ ಕಳ್ಳರು ಕಣ್ಣಾಕಿದ್ದಾರೆ. ಆದ್ದರಿಂದ ಹಗಲು ರಾತ್ರಿ ಖುದ್ದು ತೋಟದಲ್ಲೇ ಕಾವಲು ಕಾಯುತ್ತಿದ್ದೇವೆ. ಗ್ರಾಮಾಂತರ ಪೊಲೀಸ್ ಠಾಣೆಗೂ ಈ ಬಗ್ಗೆ ದೂರು ನೀಡಿದ್ದೇನೆ ಎಂದು ವಿವರಿಸಿದರು.
ಜಗದೀಶ ಅವರ ಪತ್ನಿ ಶಶಿಕಲಾ ಮಾತನಾಡಿ, ಶನಿವಾರ ಮಧ್ಯಾಹ್ನ ಮಳೆ ಸುರಿಯುತ್ತಿದ್ದ ವೇಳೆ ಆರು ಮಂದಿ ತೋಟ ನೋಡಲು ಬಂದಿದ್ದರು. ಒಂದಷ್ಟು ಹಣ್ಣು ಕಿತ್ತುಕೊಂಡರು. ತೋಟದಿಂದ ಹೊರ ಹೋಗುವಂತೆ ಹೇಳಿದರೂ ಕೇಳಲಿಲ್ಲ. ಆಗ ಪತಿಗೆ ಕರೆ ಮಾಡುವುದಾಗಿ ಹೆದರಿಸಿದಾಗ ರಾತ್ರಿಗೆ ಬರೋಣ ಎಂದು ತೆಲುಗಿನಲ್ಲಿ ಮಾತನಾಡಿಕೊಂಡು ಹೊರಟು ಹೋದರು. ಅವರೇ ಕೃತ್ಯ ಮಾಡಿರಬಹುದೆಂಬ ಅನುಮಾನವಿದೆ ಎಂದು ಹೇಳಿದರು.
ಒಟ್ಟಾರೆ, ಹಗಲಿರುಳು ಬೆವರು ಹರಿಸಿ ಬೆಳೆದ ಬೆಳೆಯಿಂದ ಸಂತುಷ್ಟ ಜೀವನ ಕಟ್ಟಿಕೊಳ್ಳಬೇಕೆಂಬ ಹಂಬಲ ಹೊಂದಿದ್ದ ರೈತರಿಗೆ ಕಳ್ಳರ ಹಾವಳಿಯಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ.