ಚಿಕ್ಕಬಳ್ಳಾಪುರ: ರಾಷ್ಟ್ರಪತಿ ದೌಪದಿ ಮುರ್ಮು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪ್ರಸಿದ್ಧ ಗಿರಿಧಾಮ ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆನಿರ್ಬಂಧ ಹೇರಲಾಗಿತ್ತು. ಆದರೆ, ರಜಾದಿನವಾದ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಕಾರಣ ಜಿಲ್ಲಾಧಿಕಾರಿ ರವೀಂದ್ರ ಅವರ ಮೌಖಿಕ ಆದೇಶದ ಮೇರೆಗೆ ಪ್ರವೇಶಾವಕಾಶ ನೀಡಲಾಗಿದೆ.

ಈ ಮೊದಲು ಜಿಲ್ಲಾಧಿಕಾರಿ ರವೀಂದ್ರ ಅವರು ಎರಡು ದಿನ ನಂದಿಬೆಟ್ಟ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು.ಅದು ಇಂದು ಬೆಳಿಗ್ಗೆ 6 ರಿಂದ ನಾಳೆ ಸಂಜೆ 6 ರವರೆಗೆ ಅನ್ವಯವಾಗುತ್ತಿತ್ತು. ಆದರೆ, ಭಾನುವಾರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಬಂದ ಪ್ರವಾಸಿಗರನ್ನು ಪೊಲೀಸರು ಬೆಟ್ಟದ ತಪ್ಪಲಿನಲ್ಲಿಯೇ ತಡೆದು ವಾಪಸ್ ಕಳಿಸಲು ಮುಂದಾದರು. ಬಳಿಕ ಜಿಲ್ಲಾಧಿಕಾರಿ ರವೀಂದ್ರ ಅವರ ಮೌಖಿಕ ಆದೇಶದ ಮೇರೆಗೆ ಪ್ರವಾಸಿಗರನ್ನು ಗಿರಿಧಾಮಕ್ಕೆ ಬಿಡಲಾಯಿತು.

ಇಂದು ಸಂಜೆ 6 ಗಂಟೆಯ ವರೆಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗ ನಿಷೇಧ ಮುಂದುವರಿಯಲಿದೆ.