ರಾಯಚೂರು : ರಾಯಚೂರು ತಾಲೂಕಿನ ಕುರುವಕಲಾ ಗ್ರಾಮದ ಬಳಿ 9 ವರ್ಷದ ಬಾಲಕ ಮೊಸಳೆ ದಾಳಿಗೆ ಬಲಿಯಾಗಿರುವ ದುರ್ಘಟನೆ ನಡೆದಿದೆ.
ಮೊಸಳೆ ದಾಳಿಗೆ ಬಲಿಯಾದ ಬಾಲಕ ನವೀನ್ ಎಂದು ತಿಳಿದುಬಂದಿದೆ.
ಶಾಲೆಗೆ ರಜೆ ಇದ್ದ ಕಾರಣ ತಂದೆ-ತಾಯಿಗಳ ಜೊತೆ ಹೊಲಕ್ಕೆ ಹೋಗಿದ್ದ ಬಾಲಕನಿಗೆ ಬಾಯಾರಿಕೆಯಾಗಿದೆ. ಈ ವೇಳೆ ಆತ ಬಾಟಲಿಯಲ್ಲಿ ನೀರು ತುಂಬಲು ಕೃಷ್ಣಾನದಿಯ ದಡದಲ್ಲಿ ಹೋದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ನವೀನ್ ಜೊತೆ ಇದ್ದ ಮತ್ತೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೃಷ್ಣನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಿದ್ದು, ಕಳೆದ ವರ್ಷವೂ ಜಿಲ್ಲೆಯಲ್ಲಿ ಮೊಸಳೆ ದಾಳಿಗೆ ಪವನ್ ಎಂಬ ಬಾಲಕ ಬಲಿಯಾಗಿದ್ದನು. ಮೊಸಳೆಗಳು ಇರುವ ಸ್ಥಳದಲ್ಲಿ ಎಚ್ಚರಿಕೆಯ ಬೋರ್ಡ್ ಹಾಕುವುದರಿಂದ ಇಂಥ ದುರಂತಗಳನ್ನು ತಪ್ಪಿಸಬಹುದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.